ಮಂಡ್ಯ: ಸರ್ಕಾರಿ ಸ್ವಾಮ್ಯದ ಮೈಷುಗರ್ ಕಾರ್ಖಾನೆಗೆ ಸಂಬಂಧಿಸಿದಂತೆ ಆಸ್ತಿಗಳನ್ನು ಕೆಲವರು ಅತಿಕ್ರಮಣ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ವಾಪಸ್ ಪಡೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಮೈಷುಗರ್ ಕಾರ್ಖಾನೆಗೆ ಸೇರಿದ ಅಪಾರ ಪ್ರಮಾಣದ ಆಸ್ತಿ ಇದೆ. ಆದರೆ ನಿರ್ವಹಣೆ ಮಾಡದ ಹಾಗೂ ಗಮನಹರಿಸದ ಪರಿಣಾಮ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಅನಧಿಕೃತವಾಗಿ ಆಸ್ತಿ ದುರ್ಬಳಕೆ ಮಾಡಿಕೊಂಡರೆ ಕ್ರಮ ತೆಗೆದುಕೊಂಡು ಮತ್ತೆ ಕಾರ್ಖಾನೆ ಸುಪರ್ದಿಗೆ ಪಡೆಯಲು ಯೋಜನೆ ರೂಪಿಸಲಾಗಿದೆ.
ಮೊದಲ ಹಂತದ ಸಭೆ: ಮೈಸೂರು ಸಕ್ಕರೆ ಕಾರ್ಖಾನೆಗೆ ಸೇರಿದ ನೂರಾರು ಎಕರೆ ಆಸ್ತಿಯು ಮಂಡ್ಯ ನಗರ ಸೇರಿದಂತೆ ತಾಲೂಕಿನ ಹಲವೆಡೆಯಲ್ಲಿದೆ. ಅವೆಲ್ಲವನ್ನೂ ಪತ್ತೆಹಚ್ಚಿ ಕಾರ್ಖಾನೆಯ ಸುಪರ್ದಿಗೆ ತೆಗೆದುಕೊಳ್ಳಲು ಅಧ್ಯಕ್ಷ ಸಿ.ಡಿ.ಗಂಗಾಧರ ಮುಂದಾಗಿರುವುದು ಉತ್ತಮ ಬೆಳವಣಿಗೆ. ಇದರ ಮೊದಲ ಹೆಜ್ಜೆಯಾಗಿ ತಹಸೀಲ್ದಾರ್ ಡಾ.ಶಿವಕುಮಾರ ಬಿರಾದಾರ್ ನೇತೃತ್ವದಲ್ಲಿ ಸೋಮವಾರ ನಗರದ ತಾಲೂಕು ಕಚೇರಿಯಲ್ಲಿ ಎಡಿಎಲ್‌ಆರ್, ರಾಜಸ್ವ ನಿರೀಕ್ಷಕರು, ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಿಗರ ಸಭೆ ನಡೆಸಿದ ಸಿ.ಡಿ.ಗಂಗಾಧರ ಅವರು ಕಾರ್ಖಾನೆಯ ಆಸ್ತಿಯು ಎಲ್ಲೆಲ್ಲಿ ಇದೆಯೋ ಅದೆಲ್ಲವನ್ನೂ ಪತ್ತೆ ವಶಕ್ಕೆ ಪಡೆಯುವಂತೆ ಸೂಚಿಸಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಂಡ್ಯ ಜಿಲ್ಲೆಯ ರೈತರ ಹಿತಕ್ಕಾಗಿ ಮೈಷುಗರ್ ಕಾರ್ಖಾನೆಯನ್ನು ಸ್ಥಾಪಿಸಿದ್ದಲ್ಲದೆ, ಹಲವು ಕಡೆ ಜಮೀನುಗಳನ್ನು ನೀಡಿದ್ದಾರೆ. ಹಲವಾರು ಕಾರಣಗಳಿಂದಾಗಿ ಆ ಆಸ್ತಿಗಳನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಕಾನೂನುಬದ್ಧವಾಗಿ ಜಮೀನನ್ನು ಪಡೆದಿದ್ದಾರೆ. ಅಂತಹವುಗಳನ್ನು ಪತ್ತೆ ಹಚ್ಚಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೆ ಕಾನೂನುಪ್ರಕಾರವಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ತೀರ್ಮಾನಿಸಲಾಗಿದೆ.
ಆರ್‌ಟಿಸಿ ಕಾರ್ಖಾನೆಯ ಹೆಸರಲ್ಲಿದ್ದು, ಕಾನೂನು ಅವರ ಪರವಾಗಿ ಇದ್ದರೂ ಅವರ ಹೆಸರಿಗೆ ನೀಡಲಾಗುವುದು. ಒಂದು ವೇಳೆ ಮೈಷುಗರ್ ಕಾರ್ಖಾನೆಯ ಹೆಸರಲ್ಲಿ ಆರ್‌ಟಿಸಿ ಇದ್ದರೆ ಅವರಿಗೆ ಯಾವುದೇ ರೀತಿಯಲ್ಲಿ ಕಾನೂನುಬದ್ಧವಾಗಿ ಮಂಜೂರಾತಿ ಆಗದಿದ್ದರೆ ಯಾವುದೇ ರೀತಿಯ ನೋಟಿಸ್ ನೀಡದೆ ಆ ಆಸ್ತಿಯನ್ನು ಕಾರ್ಖಾನೆ ವಶಕ್ಕೆ ಸಂಪೂರ್ಣವಾಗಿ ತೆಗೆದುಕೊಳ್ಳುವ ನಿರ್ಧಾರ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಯಾರಾದರೂ ಅನಧಿಕೃತವಾಗಿ ಆಸ್ತಿಯನ್ನು ಪರಭಾರೆ ಮಾಡಿದ್ದರೆ ತೆರವು ಮಾಡಬೇಕು. ಇಲ್ಲವಾದರೆ ನಿಯಮಾವಳಿ ಪ್ರಕಾರವಾಗಿ ನಾವು ಮಾಸಿಕವಾಗಿ ವಿಧಿಸುವ ಹಣವನ್ನು ಪಾವತಿಸಿಬೇಕು. ಎರಡೂ ಇಲ್ಲವಾದಲ್ಲಿ ಕಾರ್ಖಾನೆಯಿಂದ ಫೆನ್ಸಿಂಗ್ ಹಾಕಿಸಿ ಆಸ್ತಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದೆ.
ಎರಡನೇ ಹಂತದಲ್ಲಿ ಇನ್ನು ಹತ್ತು ದಿನದಲ್ಲಿ ಮತ್ತೆ ಸಭೆ ನಡೆಸಿ, ಯಾರ‌್ಯಾರು ಮೈಷುಗರ್ ಕಾರ್ಖಾನೆಯ ಆಸ್ತಿಯಲ್ಲಿ ಅನಧಿಕೃತವಾಗಿ ಇದ್ದಾರೆ ಎಂಬುದನ್ನು ತಿಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಾತ್ರವಲ್ಲದೆ ಒತ್ತುವರಿದಾರರಿಗೆ ಅಂತಹವರಿಗೆ ನೋಟಿಸ್ ನೀಡಿ 15 ದಿನದಲ್ಲಿ ವಶಪಡಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಖ್ಯವಾಗಿ ಇಲ್ಲಿಯವರೆಗೆ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಆಸ್ತಿಗೆ ಸಂಬಂಧಿಸಿದಂತೆ ಏನಾದರೂ ವ್ಯವಹಾರ ಮಾಡಿದ್ದರೆ ಅಂತಹವರಿಗೆ ಕಾನೂನು ರೀತಿಯಲ್ಲಿ ದಂಡ ವಿಧಿಸಲಾಗುವುದು. ಇದು ತಹಸೀಲ್ದಾರ್ ನೇತೃತ್ವದಲ್ಲಿ ನಡೆಯುವ ಪ್ರಕ್ರಿಯೆಯಾಗಿದೆ.

ಮೈಷುಗರ್ ಕಾರ್ಖಾನೆಯ ಇತಿಹಾಸದಲ್ಲೂ ಇದೊಂದು ಮೈಲಿಗಲ್ಲಾಗಲಿದೆ. ಕಾರ್ಖಾನೆಯ ಆಸ್ತಿಯನ್ನು ವಾಪಸ್ ಪಡೆಯುವ ನಿಟ್ಟಿನಲ್ಲಿ ತಹಸೀಲ್ದಾರ್, ಎಡಿಎಲ್‌ಆರ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಇಲ್ಲಿವರೆಗೆ ಅನಧಿಕೃತವಾಗಿ ವಾಸಿಸುತ್ತಿರುವವರನ್ನು ಕಾರ್ಖಾನೆಯ ನಿಯಮದ ಪ್ರಕಾರ ತೆರವುಗೊಳಿಸುವುದು ಅಥವಾ ಕಾರ್ಖಾನೆಗೆ ಆದಾಯ ಬರುವಂತೆ ಮಾಡಲಾಗುವುದು. ಅಲ್ಲದೆ, ಅಧಿಕೃತವಾಗಿ ಕಾನೂನುಬದ್ಧವಾಗಿ ಆಸ್ತಿಯನ್ನು ಖರೀದಿ ಮಾಡಿದ್ದರೆ ಅದೆಲ್ಲವನ್ನೂ ಪರಿಶೀಲಿಸಿ ಅಂತಹವರಿಗೆ ಹಕ್ಕುಪತ್ರ ಕೊಟ್ಟು ಅವರ ಹೆಸರಿಗೆ ಮಾಡಿಕೊಡಲಾಗುವುದು.
ಸಿ.ಡಿ.ಗಂಗಾಧರ
ಮೈಷುಗರ್ ಅಧ್ಯಕ್ಷ
ಮೈಷುಗರ್ ಕಾರ್ಖಾನೆಗೆ ಸಂಬಂಧಿಸಿದ ಜಮೀನುಗಳು ಎಲ್ಲೆಲ್ಲಿವೆಯೋ ಅವೆಲ್ಲವನ್ನೂ ಪತ್ತೆಹಚ್ಚಿ ಅಳತೆ ಮಾಡಲಾಗುವುದು. ಈ ಹಿಂದೆ ಹರಾಜು ಮೂಲಕ ಕೆಲ ರೈತರಿಗೆ ಆಸ್ತಿಯನ್ನು ನೀಡಲಾಗಿದೆ. ಇನ್ನೂ ಹಲವು ಕಡೆ ಕಾರ್ಖಾನೆಯ ಆಸ್ತಿಯು ಉಳಿದುಕೊಂಡಿದ್ದು, ಅದೆಲ್ಲವನ್ನು ಪತ್ತೆ ಹಚ್ಚಿ ಒತ್ತುವರಿ ತೆರವು ಮಾಡುತ್ತೇವೆ. ಇದರಲ್ಲಿ ಯಾವುದೇ ಮುಲಾಜಿಗೆ ಒಳಗಾಗುವುದಿಲ್ಲ.
ಡಾ.ಶಿವಕುಮಾರ ಬಿರಾದಾರ್
ತಹಸೀಲ್ದಾರ್