ನವದೆಹಲಿ: ಎರಡು ದಶಕಗಳ ಬಳಿಕ ಐಸಿಸಿ ಟೂರ್ನಿಯ ಆತಿಥ್ಯ ಒಲಿಸಿಕೊಂಡಿರುವ ಪಾಕಿಸ್ತಾನ, 2025ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲಿದೆ. ಈ ಟೂರ್ನಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಪಾಲ್ಗೊಳ್ಳುವ ಕುರಿತು ಬಿಸಿಸಿಐ ಅಲ್ಲ, ಬದಲಾಗಿ ಕೇಂದ್ರ ಗೃಹ ಸಚಿವಾಲಯ ಮತ್ತು ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ.
ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಭಾರತ ತಂಡ 2012ರ ನಂತರ ಪಾಕಿಸ್ತಾನ ವಿರುದ್ಧ ಯಾವುದೇ ದ್ವಿಪಕ್ಷೀಯ ಸರಣಿ ಆಡಿಲ್ಲ. ಕೇವಲ ಐಸಿಸಿ ಟೂರ್ನಿ ಮತ್ತು ಏಷ್ಯಾಕಪ್‌ಗಳಲ್ಲಿ ಮಾತ್ರ ಪಾಕ್ ವಿರುದ್ಧ ಆಡಿದೆ. ಇನ್ನು 2006ರಲ್ಲಿ ಕೊನೆಯದಾಗಿ ಭಾರತ ತಂಡ ಪಾಕಿಸ್ತಾನದಲ್ಲಿ ಆಡಿತ್ತು.
‘ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಸಮಯ ಬಂದಾಗ ನಿರ್ಧಾರ ತೆಗೆದುಕೊಳ್ಳಲಿದೆ. ಅದೊಂದು ಅಂತಾರಾಷ್ಟ್ರೀಯ ಟೂರ್ನಿ ಆಗಿರುವುದರಿಂದ ಎಲ್ಲ ಅಂಶಗಳನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಭದ್ರತಾ ಭೀತಿಯಿಂದಾಗಿ ಈ ಹಿಂದೆಯೂ ಹಲವು ದೇಶಗಳು ಪಾಕಿಸ್ತಾನದಲ್ಲಿ ಆಡಲು ನಿರಾಕರಿಸಿವೆ. ಅಲ್ಲಿ ಕ್ರಿಕೆಟಿಗರ ಮೇಲೆ ಉಗ್ರರ ದಾಳಿಯೂ ನಡೆದಿವೆ’ ಎಂದು ಅನುರಾಗ್ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ 2025ರ ಫೆಬ್ರವರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ನಿಗದಿಯಾಗಿದ್ದು, 2017ರಲ್ಲಿ ಕೊನೆಯದಾಗಿ ಇಂಗ್ಲೆಂಡ್‌ನಲ್ಲಿ ಈ ಟೂರ್ನಿ ನಡೆದಾಗ ಪಾಕಿಸ್ತಾನವೇ ಪ್ರಶಸ್ತಿ ಜಯಿಸಿತ್ತು. 8 ತಂಡಗಳು ಸ್ಪರ್ಧಿಸಲಿರುವ ಈ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ.
ಗೋವಾ ಚುನಾವಣೆಯಲ್ಲಿ ಲಿಯಾಂಡರ್ ಪೇಸ್ ಸ್ಪರ್ಧೆ, ಸಿಎಂ ಅಭ್ಯರ್ಥಿ ಆಗ್ತಾರಾ ಟೆನಿಸ್ ದಿಗ್ಗಜ?