ಮತದಾನ ಬಹಿಷ್ಕರಿಸಲು ನಿರ್ಧಾರ

ಹಾನಗಲ್ಲ: ರಸ್ತೆ, ನೀರು, ಶಾಲೆ, ಸಭಾಭವನ ಮತ್ತಿತರ ಮೂಲ ಸೌಕರ್ಯ ಒದಗಿಸಲು ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ತಾಲೂಕಿನ ಹುಲಗಿನಕೊಪ್ಪ ಗ್ರಾಮಸ್ಥರು ತಹಸೀಲ್ದಾರ್ ಮೂಲಕ ಚುನಾವಣಾ ಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.

150 ಮನೆಗಳು, 350 ಜನಸಂಖ್ಯೆಯುಳ್ಳ ಹುಲಗಿನಕೊಪ್ಪದಲ್ಲಿ ಪರಿಶಿಷ್ಟ ಜಾತಿಯವರೇ ಹೆಚ್ಚಿದ್ದಾರೆ. ಆದರೆ, ಮೂಲ ಸೌಲಭ್ಯಗಳನ್ನು ಸರ್ಕಾರ ಒದಗಿಸಿಲ್ಲ. ಹಿಂದೆ ಹಲವು ಬಾರಿ ತಾಲೂಕಾಡಳಿತ, ಗ್ರಾಪಂಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಸ್ವಾತಂತ್ರ್ಯ ನಂತರವೂ ಈ ಗ್ರಾಮಕ್ಕೆ ಹಾನಗಲ್ಲಿನಿಂದ ಬಸ್ ಸೌಕರ್ಯ ಒದಗಿಸಿಲ್ಲ. ಇದರಿಂದಾಗಿ ಹಲವು ಕುಟುಂಬಗಳು ಮಹಾನಗರಗಳಿಗೆ ವಲಸೆ ಹೋಗಿವೆ. ಜನಪ್ರತಿನಿಧಿಗಳು ಗ್ರಾಮಕ್ಕೆ ಬರುವುದಿಲ್ಲ. ಶಿಥಿಲಗೊಂಡ ಗ್ರಾಮದ ದೇವಸ್ಥಾನಗಳು ಜೀಣೋದ್ಧಾರವಾಗಿಲ್ಲ. ಇವೆಲ್ಲದರಿಂದ ಬೇಸತ್ತಿರುವ ಗ್ರಾಮಸ್ಥರು ಲೋಕಸಭೆ ಚುನಾವಣೆಯಲ್ಲಿ ಕಪ್ಪು ಬಟ್ಟೆ ಧರಿಸಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು 50 ಜನರು ಸಹಿ ಮಾಡಿರುವ ಮನವಿಯಲ್ಲಿ ತಿಳಿಸಿದ್ದಾರೆ. ರಾಮು ಯಳ್ಳೂರ, ಮಂಜುನಾಥ ಯಳ್ಳೂರ, ಪರಶುರಾಮ ಮಂತಗಿ, ಪರಶುರಾಮ ಭದ್ರಾವತಿ, ವೆಂಕಟೇಶ ಭದ್ರಾವತಿ, ಆನಂದ ಭೋವಿ, ಅಜಯ ಭಂಡಿವಡ್ಡರ, ಬಸವಂತಪ್ಪ ಯಳ್ಳೂರ, ಸುರೇಶ ಗೌಂಡಿ, ಪ್ರಕಾಶ ಬೆಟಗೇರಿ, ಪರಶುರಾಮ ಹಿರೇಕೆರೂರ, ಆನಂದ ದೊಡ್ಡಮನಿ, ನಾಗೇಶ ಯಳ್ಳೂರ, ನಿಖಿಲ್ ಹಿರೇಕೆರೂರ, ಹನುಮಂತಪ್ಪ ಪೂಜಾರ, ಕೃಷ್ಣ ಪೂಜಾರ, ಇತರರಿದ್ದರು.