ಭಾರತಕ್ಕೆ ಸಾಲಭಾರ!

>

ನವದೆಹಲಿ: ಆಮ್ ಆದ್ಮಿ ಜೇಬಿಗೆ ಕತ್ತರಿ ಹಾಕುತ್ತಲೇ ಜೀವನವನ್ನು ‘ದುಬಾರಿ ದುನಿಯಾ’ದ ಸುಳಿಗೆ ಸಿಲುಕಿಸಿರುವ ರೂಪಾಯಿ ಈಗ ಇಡೀ ಭಾರತಕ್ಕೇ ಭಾರವಾಗಿದೆ. ರೂಪಾಯಿ ಮೌಲ್ಯದ ಸತತ ಕುಸಿತದಿಂದಾಗಿ ಭಾರತ ವಿದೇಶಿ ಅಲ್ಪಾವಧಿ ಸಾಲದ ಮೊತ್ತ ಮರುಪಾವತಿಗೆ 68,500 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ತೆರಬೇಕಿದೆ. ಕಚ್ಚಾತೈಲ ಆಮದು ದುಬಾರಿಯಿಂದಾಗುತ್ತಿರುವ ಹೊರೆ ನಡುವೆಯೇ ಈ ಸಾಲದ ಶೂಲ ನರೇಂದ್ರ ಮೋದಿ ಸರ್ಕಾರಕ್ಕೆ ಹೊಸ ತಲೆನೋವಾಗಿದೆ.

ಡಾಲರ್ ಲೆಕ್ಕ: ಜಾಗತಿಕ ಹಣಕಾಸು ವಹಿವಾಟುಗಳು ಅಮೆರಿಕದ ಡಾಲರ್ ಲೆಕ್ಕದಲ್ಲಿ ನಡೆಯುವುದರಿಂದ ಭಾರತ ಕೂಡ ಡಾಲರ್ ಲೆಕ್ಕದಲ್ಲೇ ಸಾಲ ಮರುಪಾವತಿಸಬೇಕಿದೆ. ಸದ್ಯ ಡಾಲರ್ ಬಲಗೊಳ್ಳುತ್ತಿದ್ದು, ಅದರ ವಿರುದ್ಧ ರೂಪಾಯಿ ಮೌಲ್ಯ ಕುಸಿಯುತ್ತಿದೆ. ಹೀಗಾಗಿ ಪ್ರಸ್ತುತ ಡಾಲರ್ ಮೌಲ್ಯದ ಪ್ರಕಾರ ಸಾಲ ಮರುಪಾವತಿ ಮಾಡಬೇಕಿದ್ದರೆ ಭಾರತ ಹೆಚ್ಚುವರಿ ಮೊತ್ತ ಪಾವತಿಸಬೇಕು.

83 ರೂ.ಸನಿಹಕ್ಕೆ ಪೆಟ್ರೋಲ್

ತೈಲ ಬೆಲೆ ಏರಿಕೆ ಮುಂದುವರಿದಿದ್ದು ಶುಕ್ರವಾರ ಪ್ರತಿ ಲೀಟರ್ ಪೆಟ್ರೋಲ್ 50 ಪೈಸೆ ಹಾಗೂ ಡೀಸೆಲ್ ದರ 54 ಪೈಸೆ ಏರಿಕೆ ಕಂಡಿದೆ. ಇದರಿಂದಾಗಿ ಪೆಟ್ರೋಲ್ ದರ 82.60 ರೂ. ಹಾಗೂ ಡೀಸೆಲ್ ದರ 74.39 ರೂ.ಗೆ ತಲುಪಿದೆ. ಕಳೆದ 7 ದಿನದಲ್ಲಿ ಪೆಟ್ರೋಲ್ ದರ 1.34 ರೂ. ಹಾಗೂ ಡೀಸೆಲ್ ದರ 1.71 ರೂ. ಏರಿಕೆಯಾಗಿದೆ. ಆಗಸ್ಟ್ ಮೊದಲ ವಾರದಲ್ಲಿ 78-79 ರೂ. ಇದ್ದ ಪೆಟ್ರೋಲ್ ದರ ಇದೀಗ 82 ರೂ.ತಲುಪಿದೆ. 70 ರೂ.ನಲ್ಲಿದ್ದ ಡೀಸೆಲ್ ದರ 74 ರೂ. ಆಗಿದೆ.

ಸಾಲಾಘಾತ ಏಕೆ?

2017ರಲ್ಲಿ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರ ಸಹಿತ ಭಾರತದ ಒಟ್ಟೂ ವಿದೇಶಿ ಸಾಲ 15.5 ಲಕ್ಷ ಕೋಟಿ ರೂ. ಇತ್ತೆಂದು ಅಂದಾಜಿಸಲಾಗಿದೆ. ಇದರಲ್ಲಿ ಅರ್ಧದಷ್ಟು ಸಾಲವನ್ನು ಈಗಾಗಲೇ ತೀರಿಸಲಾಗಿದ್ದು, 7.1 ಲಕ್ಷ ಕೋಟಿ ರೂ. ಮರುಪಾವತಿ ಬಾಕಿ ಇದೆ. ಕಳೆದ ವರ್ಷ ಇದ್ದ ಸರಾಸರಿ 65.1 ರೂಪಾಯಿ ಮೌಲ್ಯದ ಆಧಾರದಲ್ಲೇ ವಿದೇಶಿ ವಿನಿಮಯ ದರದಲ್ಲಿ ಸಾಲ ಪಡೆಯಲಾಗಿದೆ. ಪ್ರಸ್ತುತ ರೂಪಾಯಿ ಮೌಲ್ಯ 72ರ ಸಮೀಪಕ್ಕೆ ಏರಿಕೆಯಾಗಿದೆ. ಇದೇ ವಿನಿಮಯ ದರದಲ್ಲಿ ಈಗ ವಿದೇಶಿ ಸಾಲ ಮರುಪಾವತಿ ಮಾಡಬೇಕಿದೆ. ಹೀಗಾಗಿ ಭಾರತದ ಮೇಲೆ 68 ಸಾವಿರ ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಮುಂದಿನ ದಿನ ಗಳಲ್ಲಿ ರೂಪಾಯಿ ಮೌಲ್ಯದಲ್ಲಿ ಚೇತರಿಕೆ ಕಂಡುಬಂದರೆ ಸಾಲದ ಹೆಚ್ಚುವರಿ ಹೊರೆ ತುಸು ಇಳಿಕೆ ಆಗಬಹುದು.

ಅಮೆರಿಕಕ್ಕೆ ಡಾಲರ್ ಅಸ್ತ್ರ

ಜಾಗತಿಕ ಆರ್ಥಿಕತೆ, ವ್ಯಾಪಾರದಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳಲು ಅಮೆರಿಕ ತನ್ನ ಡಾಲರ್ ಅನ್ನೇ ಅಸ್ತ್ರವಾಗಿಸಿಕೊಂಡಿದೆ. ವಿಶ್ವ ಆರ್ಥಿಕತೆಯಲ್ಲಿ ಶೇ.20 ಪಾಲು ಹೊಂದಿರುವ ಅಮೆರಿಕ ಅಂತಾರಾಷ್ಟ್ರೀಯ ಮಟ್ಟದ ವಹಿವಾಟು ಹಾಗೂ ಕರೆನ್ಸಿ ಸಂಗ್ರಹದಲ್ಲೂ ಶೇ.50 ಪಾಲು ಹೊಂದಿದೆ. ಹೀಗಾಗಿ ಜಾಗತಿಕ ವಿದೇಶಿ ವಿನಿಮಯದ ಮೇಲೆ ಅಮೆರಿಕ ಅತ್ಯಧಿಕ ಪ್ರಭಾವ ಹೊಂದಿದೆ. ಆಮದು ಹಾಗೂ ರಫ್ತು ವಹಿವಾಟು ಅಮೆರಿಕದ ಡಾಲರ್​ನಲ್ಲಿ ನಡೆಯುವ ಕಾರಣ, ವಿತ್ತೀಯ ಕೊರತೆ ಹಾಗೂ ಚಾಲ್ತಿ ಖಾತೆ ಕೊರತೆ ನೀಗಿಸಿಕೊಳ್ಳುವುದು ಅಮೆರಿಕಕ್ಕೆ ಸುಲಭ. ಹೀಗಾಗಿ ಆ ರಾಷ್ಟ್ರದ ಹಣಕಾಸು ನೀತಿ ಜಾಗತಿಕ ಹಣಕಾಸು ಮಾರುಕಟ್ಟೆಯ ಮೇಲೆ ತೀವ್ರ ಪ್ರಭಾವ ಬೀರುತ್ತದೆ. ಚೀನಾ, ರಷ್ಯಾ, ಯುರೋಪಿಯನ್ ಒಕ್ಕೂಟಗಳು ಡಾಲರ್ ಬದಲು ಪರ್ಯಾಯ ಕರೆನ್ಸಿ ತರಲು ಯತ್ನಿಸುತ್ತಿವೆ. ಆದರೆ ಇದನ್ನು ಜಾರಿಗೆ ತರಲು ಹಲವು ವರ್ಷಗಳೇ ಬೇಕಾಗುತ್ತದೆ.

ತೈಲ ಬೆಲೆ ಏರಿಕೆ ಜನರಿಗೆ ಹೊರೆಯಾಗುತ್ತಿದೆ. ಇದನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರದಿಂದ ಸಾಧ್ಯವೇ ಎನ್ನುವ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು.

| ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಚೀನಾ ಉತ್ಪನ್ನಕ್ಕೆ ಬೇಕು ಅಂಕುಶ: ರೂಪಾಯಿ ಕುಸಿತಕ್ಕೆ ತೈಲ ದರ ಹೆಚ್ಚಳ ತಾಂತ್ರಿಕ ಕಾರಣವಾಗಿದ್ದರೂ ಭಾರತವನ್ನು ಆವರಿಸಿರುವ ಚೀನಾ ಉತ್ಪನ್ನ ಕೂಡ ಪರೋಕ್ಷವಾಗಿ ಪ್ರಭಾವ ಬೀರುತ್ತಿದೆ. ದೇಶದ ಅರ್ಥವ್ಯವಸ್ಥೆ ಮೇಲೆ ಪ್ರಭುತ್ವ ಸಾಧಿಸುತ್ತಿರುವ ‘ಮೇಡ್ ಇನ್ ಚೀನಾ’ ಉತ್ಪನ್ನವನ್ನು ಭಾರತೀಯರು ಸ್ವಇಚ್ಛೆಯಿಂದ ಬಹಿಷ್ಕರಿಸಿದರಷ್ಟೇ ರೂಪಾಯಿ ಹೊಳೆಯುವುದು ಸಾಧ್ಯ.

ಜನರಿಗೆ ಮುಗಿದಿಲ್ಲ ಆತಂಕ: ರೂಪಾಯಿ ಮೌಲ್ಯ ಶುಕ್ರವಾರ 72 ರೂ.ಗೆ ತಲುಪಿತ್ತು. ಕೆಲ ದಿನಗಳಲ್ಲಿ ಇದು ಚೇತರಿಕೆ ಕಾಣದಿದ್ದರೆ ದೇಶದ ಚಾಲ್ತಿ ಖಾತೆ ಕೊರತೆ ಹೆಚ್ಚುವ ಸಾಧ್ಯತೆ ಇದೆ. ಒಂದು ವೇಳೆ ರೂಪಾಯಿ ಮೌಲ್ಯ 73ಕ್ಕೆ ಕುಸಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್​ಗೆ 76 ಡಾಲರ್ ಸರಾಸರಿಯಲ್ಲಿ ಡಿಸೆಂಬರ್​ವರೆಗೆ ವಹಿವಾಟು ನಡೆಸಬೇಕಾಗುತ್ತದೆ. ಹೀಗಾದಲ್ಲಿ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಭಾರತದ ವಾರ್ಷಿಕ ತೈಲ ಆಮದು ಮೊತ್ತಕ್ಕೆ -ಠಿ; 45,700 ಕೋಟಿ ಹೆಚ್ಚುವರಿ ಸೇರ್ಪಡೆ ಆಗುತ್ತದೆ (ಭಾರತದ ವಾರ್ಷಿಕ ತೈಲ ಆಮದು ಮೊತ್ತ -ಠಿ; 4.5 ಲಕ್ಷ ಕೋಟಿ) ಎಂದು ಎಸ್​ಬಿಐನ ಮುಖ್ಯ ಆರ್ಥಿಕ ಸಲಹೆಗಾರ್ತಿ ಸೌಮ್ಯಾ ಕಾಂತಿಘೋಷ್ ಅಭಿಪ್ರಾಯ ಪಟ್ಟಿದ್ದಾರೆ. ಇದರಿಂದ ಸಹಜವಾಗಿಯೇ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಏರಿಕೆಯಾಗಿ ಜನರಿಗೆ ಹೊರೆ ಬೀಳಲಿದೆ.

ರೂಪಾಯಿ ಅಲ್ಪ ಚೇತರಿಕೆ: 7 ದಿನಗಳಿಂದ ಅಮೆರಿಕ ಡಾಲರ್ ಎದುರು ಸತತ ಇಳಿಕೆ ಕಾಣುತ್ತಿದ್ದ ರೂಪಾಯಿ ಮೌಲ್ಯ ಶುಕ್ರವಾರ 26 ಪೈಸೆ ಚೇತರಿಕೆ ಕಂಡಿದೆ. ಬೆಳಗ್ಗೆ ವಹಿವಾಟು ಆರಂಭ ಆಗುತ್ತಿದ್ದಂತೆ -ಠಿ;72.04 ಗೆ ಕುಸಿದು ಆತಂಕ ಮೂಡಿಸಿತ್ತಾದರೂ ದಿನದ ಅಂತ್ಯಕ್ಕೆ 26 ಪೈಸೆ ಚೇತರಿಕೆ ಕಂಡು 71.73ರಲ್ಲಿ ಮುಕ್ತಾಯವಾಯಿತು. ಆರ್​ಬಿಐ ಮಧ್ಯಪ್ರವೇಶದಿಂದ ರೂಪಾಯಿ ಮೌಲ್ಯದಲ್ಲಿ ತುಸು ಚೇತರಿಕೆ ಕಂಡುಬಂತು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಚಿನ್ನ, ಬೆಳ್ಳಿ ತುಸು ಅಗ್ಗ

ಮುಂಬೈ ಚಿನಿವಾರ ಪೇಟೆಯಲ್ಲಿ ಚಿನ್ನ ಪ್ರತಿ 10 ಗ್ರಾಂಗೆ 155 ರೂ. ಇಳಿಕೆ ಕಂಡು 30,430 ರೂ.ಗೆ ಬಂದಿದೆ. ದೇಶೀಯ ಆಭರಣ ತಯಾರಕರು, ವ್ಯಾಪಾರಸ್ಥರಿಂದ ಬೇಡಿಕೆ ತಗ್ಗಿದ ಪರಿಣಾಮ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಕೂಡ ಪ್ರತಿ ಕೆಜಿಗೆ 340 ರೂ. ಇಳಿಕೆ ಕಂಡು 36,480 ರೂ. ಆಗಿದೆ.

ಸೆನ್ಸೆಕ್ಸ್ 147 ಅಂಶ ಏರಿಕೆ

ಭಾರತೀಯ ಷೇರು ಮಾರುಕಟ್ಟೆ ಶುಕ್ರವಾರದ ವಹಿವಾಟಿನಲ್ಲಿ ತುಸು ಚೇತರಿಕೆ ಕಂಡಿದೆ. ಸೆನ್ಸೆಕ್ಸ್ 147 ಅಂಕ ಏರಿಕೆ ಕಂಡು 38,389ರಲ್ಲಿ ಹಾಗೂ ನಿಫ್ಟಿ 52.2 ಅಂಕ ಏರಿಕೆ ಕಂಡು 11, 589ರಲ್ಲಿ ವಹಿವಾಟು ಪೂರ್ಣಗೊಳಿಸಿತು. ಎಲೆಕ್ಟ್ರಿಕ್, ಪರ್ಯಾಯ ಇಂಧನ ವಾಹನಗಳಿಗೆ ಪರ್ವಿುಟ್ ವಿನಾಯ್ತಿ ನೀಡಲು ಮುಂದಾಗಿರುವ ಹಿನ್ನೆಲೆ ಆಟೋ ಷೇರುಗಳಲ್ಲಿ ಚೇತರಿಕೆ ಕಂಡುಬಂತು.