ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಕೊಕಟನೂರ: ಸಾಲಬಾಧೆ ತಾಳಲಾರದೆ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ರೈತರೊಬ್ಬರು ಗುರುವಾರ ಮಧ್ಯರಾತ್ರಿ ಆಲದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಣಮಂತ ಶಿವಪ್ಪ ಕಾಡಪ್ಪನವರ (52) ಆತ್ಮಹತ್ಯೆ ಮಾಡಿಕೊಂಡವರು. ಇವರು 4 ಎಕರೆ 39 ಗುಂಟೆ ಜಮೀನು ಹೊಂದಿದ್ದು, ಜಮೀನು ಸಾಗುವಳಿ ಮತ್ತು ನೀರಾವರಿ ಉದ್ದೇಶಕ್ಕಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ 3.20 ಲಕ್ಷ ಮತ್ತು ಬನಹಟ್ಟಿಯ ಕರ್ನಾಟಕ ಬ್ಯಾಂಕ್‌ನಲ್ಲಿ 8 ಲಕ್ಷ ಸಾಲ ಮಾಡಿದ್ದರು. ಸಕ್ಕರೆ ಕಾರ್ಖಾನೆಗೆ ಕಳಿಸಿದ ಕಬ್ಬಿನ ಬಿಲ್ ಬಾರದೆ ಇರುವುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅಥಣಿ ತಹಸೀಲ್ದಾರ್ ಪ್ರಶಾಂತ ಪಾಟೀಲ, ತೇರದಾಳ ಪಿಎಸ್‌ಐ ಗುರುನಾಥ ಚವ್ಹಾಣ, ಕಂದಾಯ ನಿರೀಕ್ಷಕ ಜಿತೇಂದ್ರ ನಿಡೋಣಿ, ಗ್ರಾಮ ಲೆಕ್ಕಾಧಿಕಾರಿ ಈರಣ್ಣ ನಿಂಗವ್ವಗೋಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.