ಅಭಿನಂದನ್​ ವಿಚಾರಣೆ ಅಂತ್ಯ: ಕೆಲ ವಾರಗಳ ಕಾಲ ರಜೆ ಮೇಲೆ ತೆರಳುವಂತೆ ಸೂಚನೆ

ನವದೆಹಲಿ: ಭಾರತದ ವಾಯುಪ್ರದೇಶವನ್ನು ಅಕ್ರಮವಾಗಿ ಪ್ರವೇಶ ಮಾಡಿದ್ದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಬೆನ್ನತ್ತಿ ಹೋಗಿ ಹೊಡೆದುರುಳಿಸಿ, ನಂತರ ಅಲ್ಲಿನ ಸೇನೆಗೆ ಸೆರೆಸಿಕ್ಕು ಬಿಡುಗಡೆಯಾಗಿದ್ದ ಭಾರತೀಯ ಸೇನಾ ಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರ ವಿಚಾರಣೆ ಪೂರ್ಣಗೊಂಡಿದ್ದು, ಸದ್ಯ ಅನಾರೋಗ್ಯದ ರಜೆ ಮೇಲೆ ತೆರಳುವಂತೆ ಸೇನೆ ಸೂಚನೆ ನೀಡಿದೆ.

ಈ ಕುರಿತು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್​ಐ ಭಾರತೀಯ ವಾಯುಸೇನೆಯ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ” ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರ ವಿಚಾರಣೆ ಮುಗಿದಿದೆ. ಭಾರತೀಯ ವಾಯು ಸೇನೆಯೂ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ಅವರ ವಿಚಾರಣೆ ನಡೆಸಿವೆ. ಸದ್ಯ ಅಭಿನಂದನ್​ ಅವರು ಸೇನಾ ವೈದ್ಯರ ಸಲಹೆ ಮೇರೆಗೆ ಕೆಲ ವಾರಗಳ ಕಾಲ ಆನಾರೋಗ್ಯದ ರಜೆ ಮೇಲೆ ತೆರಳುತ್ತಿದ್ದಾರೆ,” ಎಂದು ಮೂಲಗಳು ತಿಳಿಸಿರುವುದಾಗಿ ಎಎನ್​ಐ ವರದಿ ಮಾಡಿದೆ.

ಅಲ್ಲದೆ, ” ಅಭಿನಂದನ್​ ಅವರ ವೈದ್ಯಕೀಯ ದೃಢತೆಯನ್ನು ಮುಂದಿನ ದಿನಗಳಲ್ಲಿ ವೈದ್ಯಕೀಯ ಮಂಡಳಿಯು ಪರಾಮರ್ಶೆ ಮಾಡಲಿದೆ. ಅಲ್ಲಿನ ವರದಿ ಆಧರಿಸಿ ಅವರು ಕರ್ತವ್ಯಕ್ಕೆ ಹಾಜರಾಗಬಹುದುದೇ ಇಲ್ಲವೇ ಎಂಬುದನ್ನು ನಿರ್ಧರಿಸಲಾಗುತ್ತದೆ,” ಎಂದೂ ಮೂಲಗಳು ತಿಳಿಸಿವೆ ಎನ್ನಲಾಗಿದೆ.

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ಜೈಷ್​ ಎ ಮೊಹಮದ್​ ಸಂಘಟನೆಯ ಭಯೋತ್ಪಾದನಾ ದಾಳಿಗೆ ಉತ್ತರವಾಗಿ ಭಾರತೀಯ ಸೇನೆಯೂ ಪಾಕಿಸ್ತಾನದ ಬಾಲಾಕೋಟ್​ನಲ್ಲಿರುವ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡುವ ಉದ್ದೇಶದಿಂದ ಹಲವು ಯುದ್ಧ ವಿಮಾನಗಳನ್ನು ಭಾರತದತ್ತ ರವಾನಿಸಿತ್ತು. ಈ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಲು ಹೊರಟಿದ್ದ ಭಾರತೀಯ ವಾಯುಸೇನೆಯ ವಿಂಗ್​ ಕಮಾಂಡರ್​ ಪಾಕಿಸ್ತಾನದ F16 ಅನ್ನು ಹೊಡೆದುರುಳಿಸಿದ್ದರು. ಈ ಕಾಳಗದಲ್ಲಿ ಅಭಿನಂದನ್​ ವಿಮಾನಕ್ಕೂ ಹಾನಿಯಾಗಿ ಅದು ಪಾಕಿಸ್ತಾನದಲ್ಲೆ ಪತನವಾಗಿತ್ತಾದರೂ, ಅಭಿನಂದನ್​ ಪ್ಯಾರಾಚೂಟ್​ ಬಳಸಿ ಪಾಕಿಸ್ತಾನದಲ್ಲಿ ಇಳಿದಿದ್ದರು. ನಂತರ ಅವರನ್ನು ಅಲ್ಲಿನ ಸೇನೆ ಬಂಧಿಸಿ ಎರಡು ದಿನಗಳ ನಂತರ ಬಿಡುಗಡೆ ಮಾಡಿತ್ತು.