ಬಾಲ್ಯ ವಿವಾಹ ಪದ್ಧತಿ ಇನ್ನೂ ಜೀವಂತ

ವಿಜಯವಾಣಿ ಸುದ್ದಿಜಾಲ ಹಾವೇರಿ

ವಯೋಮಾನಕ್ಕಿಂತ ಮೊದಲೇ ಮದುವೆ ಮಾಡುವುದು ಶಿಕ್ಷಾರ್ಹ ಅಪರಾಧ. ಇಂತಹ ಮದುವೆಗಳು ಕಾನೂನು ಬಾಹಿರವಾಗಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಸ್.ಎಚ್. ರೇಣುಕಾದೇವಿ ಹೇಳಿದರು.

ನಗರದ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆಶಾಕಿರಣ ರೂರಲ್ ಡೆವಲಪ್​ವೆುಂಟ್ ಸೊಸೈಟಿ ಸಹಯೋಗದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಜಿಲ್ಲೆಯ ಎಲ್ಲ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು ಹಾಗೂ ಬಾಲ್ಯವಿವಾಹ ನಿಷೇಧಾಧಿಕಾರಿಗಳಿಗೆ ಭಾನುವಾರ ಆಯೋಜಿಸಿದ್ದ ಒಂದು ದಿನದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮದುವೆಗೆ ಬಹಳ ದೊಡ್ಡ ಸಾಮಾಜಿಕ ಮನ್ನಣೆಯಿದೆ. ತಂದೆ-ತಾಯಿ ತಮ್ಮ ಜವಾಬ್ದಾರಿ ಕಳೆದುಕೊಳ್ಳಲು ಚಿಕ್ಕ ವಯಸ್ಸಿ ನಲ್ಲಿಯೇ ಮಕ್ಕಳಿಗೆ ಮದುವೆ ಮಾಡುವ ಪದ್ಧತಿ ಕೆಲ ಕುಟುಂಬಗಳಲ್ಲಿ ಇನ್ನೂ ಜೀವಂತ ವಾಗಿರುವುದು ದುಃಖದ ಸಂಗತಿ. 18ವರ್ಷ ತುಂಬಿದ ಹೆಣ್ಣು- 21ವರ್ಷ ದಾಟಿದ ಗಂಡಿಗೆ ಮಾತ್ರ ಮದುವೆ ಮಾಡಬೇಕು ಎಂದರು.

ಬಾಲ್ಯವಿವಾಹದಿಂದ ಆಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಪ್ರಾಥಮಿಕ ಹಂತದ ಅರಿವು ಹೊಂದಿ ಜನಸಾಮಾನ್ಯರಿಗೆ ಜಾಗೃತಿ ಮೂಡಿಸಬೇಕು ಎಂದರು.

ಬೆಂಗಳೂರು ಚೈಲ್ಡ್ ರೈಟ್ಸ್ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕ ಎನ್.ವಿ. ವಾಸುದೇವ ಶರ್ಮಾ ಮಾತನಾಡಿ, ಬಾಲ್ಯವಿವಾಹ ತಡೆಯುವುದು ಮೊದಲ ಆದ್ಯತೆಯಾಗಿದೆ. ಬಾಲ್ಯವಿವಾಹವಾದನಂತರ ಪ್ರಕರಣಗಳು ಬೆಳಕಿಗೆ ಬಂದರೂ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಸುಳ್ಳು ದಾಖಲೆಗಳ ಸೃಷ್ಟಿ ನಿಲ್ಲಿಸುವ ಕೆಲಸವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು ಎಂದ ಅವರು, ಬಾಲ್ಯವಿವಾಹ ತಡೆ ಹೇಗೆ, ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಪ್ರಚಲಿತ ಸಮಸ್ಯೆಗಳ ಕುರಿತು ಸಂವಾದ ನಡೆಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ವೈ.ಎಲ್. ಲಾಡಖಾನ್ ಮಾತನಾಡಿ, ಬಾಲ್ಯವಿವಾಹ ನಿಮೂಲನೆ ಕಾನೂನಿನಿಂದ ಮಾತ್ರ ಸಾಧ್ಯವಿಲ್ಲ. ಪ್ರತಿ ಯೊಬ್ಬ ಪ್ರಜೆ ಹಾಗೂ ಪ್ರಜ್ಞಾವಂತ ವ್ಯಕ್ತಿಗಳು ಸಹಕಾರ ನೀಡಿದಾಗ ಬಾಲ್ಯವಿವಾಹ ನಿಷೇಧ ಕಾಯ್ದೆ ಯಶಸ್ವಿಯಾಗಲು ಸಾಧ್ಯ ಎಂದರು.

ಆಶಾಕಿರಣ ರೂರಲ್ ಡೆವಲಪ್​ವೆುಂಟ್ ಸೊಸೈಟಿ ಅಧ್ಯಕ್ಷ ಮುತ್ತುರಾಜ ಮಾದರ, ಬಾಲ್ಯವಿವಾಹ ನಿಷೇಧಾಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಉಪನ್ಯಾಸ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್. ಮಾಳಗೇರ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್. ಮಜೀದ ಉಪಸ್ಥಿತರಿದ್ದರು. ಸಿಡಿಪಿಒ ಉಮಾ ಕೆ.ಎಸ್., ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿನಾಯಕ ಗುಡಗೂರ ನಿರೂಪಿಸಿದರು.