ಭಯೋತ್ಪಾದನೆ ಕೃತ್ಯಗಳಿಗಿಂತ ರಸ್ತೆ ಗುಂಡಿಗಳಿಗೇ ಜಾಸ್ತಿ ಬಲಿ: ಸುಪ್ರೀಂ ಕಳವಳ

ನವದೆಹಲಿ: ಕಳೆದ 5 ವರ್ಷಗಳಲ್ಲಿಯೇ ರಸ್ತೆಯಲ್ಲಿರುವ ಗುಂಡಿಗಳಿಂದಾಗುವ ಅಪಘಾತದಲ್ಲಿ 14,926 ಜನ ಬಲಿಯಾಗಿದ್ದು, ಇದು ಸ್ವೀಕಾರಾರ್ಹವಲ್ಲ ಎಂದು ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಮೂರ್ತಿ ಮದನ್‌ ಬಿ ಲೋಕುರ್‌ ನೇತೃತ್ವದ ಪೀಠ, ದೇಶಾದ್ಯಂತ ರಸ್ತೆ ಗುಂಡಿಗಳಿಗೆ ಅಧಿಕ ಜನರು ಬಲಿಯಾಗುತ್ತಿದ್ದು, ಬಹುಶಃ ಇದು ಗಡಿಯಲ್ಲಿ ಅಥವಾ ಉಗ್ರರಿಂದ ಕೊಲ್ಲಲ್ಪಡುವವರಿಗಿಂತಲೂ ಹೆಚ್ಚಾಗಿದೆ ಎಂದು ಹೇಳಿದೆ.

ಪೀಠದಲ್ಲಿದ್ದ ನ್ಯಾಯಾಧೀಶರಾದ ದೀಪಕ್‌ ಗುಪ್ತಾ ಮತ್ತು ಹೇಮಂತ್‌ ಗುಪ್ತಾ ಅವರು, 2013 ರಿಂದ 2017ರವಗೆ ನಡೆದ ಬಹುತೇಕ ಅಪಘಾತಗಳು ರಸ್ತೆ ಗುಂಡಿಗಳಿಂದಾಗಿ ನಡೆದಿವೆ. ಇದರಿಂದಾಗಿ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ನಿರ್ವಹಣೆಯಲ್ಲಿ ಎಡವಿರುವುದು ಕಾಣಿಸುತ್ತದೆ ಎಂದಿದ್ದಾರೆ.

ರಸ್ತೆ ಸುರಕ್ಷತೆ ಕುರಿತಾಗಿ ನಿವೃತ್ತ ನ್ಯಾಯಾಧೀಶರಾದ ಕೆ.ಎಸ್‌. ರಾಧಾಕೃಷ್ಣನ್‌ ಅವರ ನೇತೃತ್ವದ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ ಬಹುತೇಕ ಸಾವುಗಳು ಭಾರತದಲ್ಲಿ ರಸ್ತೆಯ ಗುಂಡಿಗಳಿಂದಲೇ ಸಂಭವಿಸಿವೆ ಎಂದು ಹೇಳಿದೆ. ಈ ಕುರಿತು ಕೇಂದ್ರ ಸರ್ಕಾರ ಪ್ರತಿಕ್ರಿಯಿಸುವಂತೆ ಸುಪ್ರೀಂ ಆದೇಶಿಸಿದೆ. ಇದೇ ವೇಳೆ ಗುಂಡಿಗಳಿಗೆ ಬಲಿಯಾದವರು ಕೂಡ ಪರಿಹಾರಕ್ಕೆ ಅರ್ಹರಾಗಿರುತ್ತಾರೆ ಎಂದಿದೆ.

ಭಯೋತ್ಪಾದಕ ದಾಳಿಯಲ್ಲಿ ಮೃತಪಡುವವರಿಗಿಂತಲೂ ರಸ್ತೆ ಅಪಘಾತಗಳಿಂದಾಗಿಯೇ ಮೃತಪಡುವವರ ಸಂಖ್ಯೆ ಹೆಚ್ಚಿದ್ದು, ಸುಪ್ರೀಂಕೋರ್ಟ್‌ ಜು. 20ರಂದು ಕಳವಳ ವ್ಯಕ್ತಪಡಿಸಿತ್ತು. ಹಾಗಾಗಿ ರಸ್ತೆ ಸುರಕ್ಷತೆ ಕುರಿತಾಗಿ ಸುಪ್ರೀಂಕೋರ್ಟ್ ಸಮಿತಿಯನ್ನು ರಚಿಸಿ 2 ವಾರದಲ್ಲಿ ವರದಿ ನೀಡುವಂತೆ ಸೂಚಿಸಿತ್ತು. (ಏಜೆನ್ಸೀಸ್)