More

    ಉಡುಪಿ ಜಿಲ್ಲೆಯಲ್ಲಿ ದ್ವಿಚಕ್ರ ವಾಹನಕ್ಕೆ ಬಲಿ ಜಾಸ್ತಿ!

    ಉಡುಪಿ: ವರ್ಷದಿಂದ ವರ್ಷಕ್ಕೆ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಮೃತರ ಪ್ರಮಾಣವೂ ಏರುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ 6 ವರ್ಷಗಳಲ್ಲಿ 1393 ಮಂದಿ ಪ್ರಾಣ ಕಳೆದುಕೊಂಡಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ 1169 ಮಂದಿಯ ಸಾವಿಗೆ ಅಪಘಾತಗಳು ಕಾರಣವಾಗಿವೆ. ಉಡುಪಿಯಲ್ಲಿ ಅಪಘಾತ ಪ್ರಮಾಣ ಕಡಿಮೆ ಇದ್ದರೂ, ಬಲಿಯಾದವರ ಸಂಖ್ಯೆ ಹೆಚ್ಚಿದೆ. ಜಿಲ್ಲೆಯಲ್ಲಿ 2014ರಲ್ಲಿ ಸಂಭವಿಸಿದ ಅಪಘಾತಗಳಲ್ಲಿ 220 ಜೀವಗಳು ಬಲಿಯಾಗಿದ್ದು, 1465 ಜನ ಗಾಯಗೊಂಡಿದ್ದರು. 2015ರಲ್ಲಿ ಅಸುನೀಗಿದವರ ಸಂಖ್ಯೆ 231. ಗಾಯಾಳು ಸಂಖ್ಯೆ ಕಡಿಮೆಯಾಗಿದೆ. 2016ರಲ್ಲಿ 189 ಮಂದಿ ಮೃತರಾಗಿದ್ದರೆ, 2017ರಲ್ಲಿ 225 ಅಪಘಾತದಲ್ಲಿ 231 ಮಂದಿ ಸಾವನ್ನಪ್ಪಿದ್ದಾರೆ. 2018ರ 218 ಪ್ರಕರಣಗಳಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 228. 2019ರಲ್ಲಿ ಸಂಭವಿಸಿದ್ದ 246 ಅಪಘಾತಗಳು 259 ಮಂದಿಯ ಪ್ರಾಣಕ್ಕೆ ಕುತ್ತು ತಂದಿದ್ದವು.

    ದ.ಕ.ದಲ್ಲಿ 1169 ಸಾವು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ 1169 ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡವರು 3813 ಮಂದಿ. 2015ರಲ್ಲಿ 246 ಮಂದಿ ಅಸುನೀಗಿ, 973 ಮಂದಿ ಗಾಯಗೊಂಡಿದ್ದರು. 2016ರಲ್ಲಿ ಮರಣ ಸಂಖ್ಯೆ 213. 712 ಗಾಯಾಳುಗಳಾಗಿದ್ದರು. 2017ರಲ್ಲಿ 260 ಮಂದಿ ಕೊನೆಯುಸಿರೆಳೆದು, 817 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. 2018ರಲ್ಲಿ 218 ಮಂದಿ ಮೃತಪಟ್ಟಿದ್ದರು. 2019ರಲ್ಲಿ 232 ಮಂದಿ ಅಸುನೀಗಿ, 598 ಮಂದಿ ಗಾಯಗೊಂಡಿದ್ದರು.

    ಟಾಪ್ ಐದರಲ್ಲಿ ಕರ್ನಾಟಕ: ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಇಲಾಖೆ ಬಿಡುಗಡೆ ಮಾಡಿರುವ 2018ರ ವರದಿಯಲ್ಲಿ ಕರ್ನಾಟಕ ಟಾಪ್ ಐದು ರಾಜ್ಯಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ತಮಿಳುನಾಡು ಮೊದಲನೇ ಸ್ಥಾನದಲ್ಲಿದೆ. 2018ರಲ್ಲಿ 41,707 ಅಪಘಾತ ಪ್ರಕರಣಗಳು ರಾಜ್ಯದಲ್ಲಿ ಸಂಭವಿಸಿ, 10,990 ಮಂದಿ ಜೀವವನ್ನೇ ಕಳೆದುಕೊಂಡಿದ್ದರು. ಸಾವಿನ ಪ್ರಮಾಣದಲ್ಲಿ ರಾಜ್ಯ 4ನೇ ಸ್ಥಾನದಲ್ಲಿದೆ.

    ಅತಿ ವೇಗ, ಮದ್ಯ ಸೇವನೆ: ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಇಲಾಖೆ ಪ್ರಕಟಿಸಿದ ವರದಿಯನ್ನು ವಿಶ್ಲೇಷಣೆ ಮಾಡಿರುವ ತಜ್ಞರು, ದೇಶದಲ್ಲಿ ಪ್ರತೀ 18 ನಿಮಿಷಕ್ಕೊಬ್ಬರು ಅಪಘಾತದಿಂದ ಕೊನೆಯುಸಿರೆಳೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಮುಖ್ಯವಾಗಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಅಪಘಾತದಲ್ಲಿ ಸಾಯುವವರ ಸಂಖ್ಯೆ ಹೆಚ್ಚಳವಾಗಿದೆ. ನಗರ ಭಾಗದ ರಸ್ತೆಗಳಿಗಿಂತ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಅಪಘಾತ ಸಂಖ್ಯೆ ಏರಿಕೆಯಾಗಿದೆ. ವೇಗದ ಚಾಲನೆ, ಅಜಾಗರೂಕತೆ, ಮದ್ಯ ಸೇವನೆ, ಮೊಬೈಲ್ ಬಳಕೆ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ಪ್ರಮುಖ ಕಾರಣ ಎನ್ನುತ್ತಾರೆ ಅಧಿಕಾರಿಗಳು.

    ಯುವಕರೇ ಜಾಸ್ತಿ: ರಸ್ತೆ ಅಪಘಾತದಲ್ಲಿ 18 ವರ್ಷದ ಕೆಳಗೆ ಮತ್ತು 18ರಿಂದ 35 ವರ್ಷದೊಳಗಿನ ಯುವಕರೇ ಹೆಚ್ಚು ಬಲಿಯಾಗಿರುವುದು ಅಂಕಿಅಂಶದಲ್ಲಿ ಪತ್ತೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ 2014ರಲ್ಲಿ 70, 2015ರಲ್ಲಿ 435, 2016ರಲ್ಲಿ 72, 2017ರಲ್ಲಿ 92, 2018ರಲ್ಲಿ 145 ಯುವಕರು ಕಳೆದ 6 ವರ್ಷಗಳಲ್ಲಿ ಮೃತಪಟ್ಟಿದ್ದರು. ಶೇ.33ರಷ್ಟು ಅಪಘಾತಗಳು ದ್ವಿಚಕ್ರ ವಾಹನಗಳಿಂದಲೇ ಸಂಭವಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂಥ ಅಪಘಾತಗಳೇ ಹೆಚ್ಚು.

    ದೇಶದಲ್ಲಿ ಪ್ರತಿವರ್ಷ ಇತರೆ ಕಾರಣಗಳಿಂದ ಮರಣ ಹೊಂದುವವರಿಗಿಂತ ಅಪಘಾತದಿಂದ ಮರಣ ಹೊಂದುವವರ ಸಂಖ್ಯೆ ಅಧಿಕವಾಗಿದೆ, 18-35 ವರ್ಷದ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮರಣ ಹೊಂದುತ್ತಿದ್ದು, ಇದರಿಂದ ಇಡೀ ಕುಟುಂಬ ಆಧಾರಸ್ತಂಭ ಕಳೆದುಕೊಳ್ಳುವಂತಾಗಿದೆ.
    ಡಾ.ಕೃಷ್ಣಪ್ರಸಾದ್ ಪಿ.ಆರ್, ಮಣಿಪಾಲ ಕೆಎಂಸಿ ಆಸ್ಪತ್ರೆ

    ಉಡುಪಿಯಲ್ಲಿ ಅಪಘಾತ ಪ್ರಕರಣ ಕಡಿಮೆ ಇದ್ದು, ಅಪಘಾತದಿಂದ ಮರಣ ಹೊಂದುವವರ ಸಂಖ್ಯೆ ಅಧಿಕವಾಗಿದೆ. ದಂಡ ವಿಧಿಸುವುದರಿಂದ ಮಾತ್ರ ಅಪಘಾತ ಕಡಿಮೆಗೊಳಿಸಲು ಸಾಧ್ಯವಿಲ್ಲ, ಜನರು ಸ್ವಯಂ ಪ್ರೇರಿತವಾಗಿ ಕಾನೂನು ಮತ್ತು ಸುರಕ್ಷತಾ ನಿಯಮ ಪಾಲಿಸಬೇಕು.
    – ಕುಮಾರಚಂದ್ರ, ಎಎಸ್‌ಪಿ, ಉಡುಪಿ

    – ಅವಿನ್ ಶೆಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts