ಮುಂಬೈ: ಮಂಗಳವಾರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವಿಗೀಡಾದವರ ಸಂಖ್ಯೆ 26ಕ್ಕೆ ಏರಿದೆ.
ಬಸ್ ಮತ್ತು ಆಟೋ ನಡುವೆ ಡಿಕ್ಕಿಸಿ ಸಂಭವಿಸಿ, ಎರಡು ವಾಹನಗಳು ಪಕ್ಕದಲ್ಲೇ ಇದ್ದ ಬಾವಿಗೆ ಬಿದ್ದಿದ್ದವು. ಹೀಗಾಗಿ ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ, 32 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಮಂಗಳವಾರ ಸಂಜೆ ಅವಘಡ ನಡೆಯಿತು. ವೇಗವಾಗಿ ಬರುತ್ತಿದ್ದ ರಾಜ್ಯ ಸರ್ಕಾರಿ ಬಸ್, ಆಟೋಗೆ ಡಿಕ್ಕಿ ಹೊಡೆಯಿತು. ಪರಿಣಾಮ ಎರಡು ವಾಹನಗಳು ರಸ್ತೆ ಪಕ್ಕದಲ್ಲಿದ್ದ ಬಾವಿ ಒಳಗಡೆ ಬಿದ್ದವು. ಉತ್ತರ ಮಹಾರಾಷ್ಟ್ರ ಜಿಲ್ಲೆಯಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಡಿಯೋಲಾ ಬಳಿಯ ಮೇಶಿ ಘಾಟ್ ಬಳಿ ಈ ದುರ್ಘಟನೆ ಸಂಭವಿಸಿದೆ.
ಈವರೆಗೂ 15 ಮೃತದೇಹಗಳನ್ನು ಬಾವಿಯಿಂದ ಹೊರಕ್ಕೆ ತರಲಾಗಿದೆ. ಗಾಯಾಳುಗಳನ್ನು ಮಾಲೆಂಗಾವ್ ಮತ್ತು ಡಿಯೋಲಾದಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ನಾಸಿಕ್ ಗ್ರಾಮೀಣ ಪ್ರದೇಶದ ಉಪ ಪೊಲೀಸ್ ವರಿಷ್ಠಾಧಿಕಾರಿ ಸದಾಶಿವ್ ತಿಳಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಬಸ್ ಧುಲೆ ಜಿಲ್ಲೆಯನ್ನು ಬಿಟ್ಟು ನಾಸಿಕ್ ಜಿಲ್ಲೆಯ ಕಲ್ವಾನ್ಗೆ ತೆರಳುತ್ತಿತ್ತು. ವೇಗವಾಗಿ ತೆರಳುತ್ತಿದ್ದಾಗ ಎದುರಿಗೆ ಬಂದು ಆಟೋ ಡಿಕ್ಕಿ ಹೊಡೆದ ಪರಿಣಾಮ ಈ ಭೀರಕ ಅಪಘಾತ ಸಂಭವಿಸಿದೆ. (ಏಜೆನ್ಸೀಸ್)