ಕೇರಳ ರಾಜ್ಯದಲ್ಲಿ ಸಾವಿನ ಸಂಖ್ಯೆ 89ಕ್ಕೇರಿಕೆ

ಕಾಸರಗೋಡು: ಮಳೆ ಬಿರುಸು ಕಳೆದುಕೊಂಡರೂ, ಕೇರಳದಲ್ಲಿ ಭೂಕುಸಿತ ಹಾಗೂ ನೆರೆ ಹಾವಳಿಗೆ ತುತ್ತಾದವರ ಸಂಕಷ್ಟ ದೂರಾಗಲು ಇನ್ನೂ ಕೆಲವು ದಿನ ಕಾಯಬೇಕಾಗಿದೆ. ಕವಳಪ್ಪಾರೆಯಲ್ಲಿ 59 ಮಂದಿ ನಾಪತ್ತೆಯಾಗಿದ್ದು, ಇದುವರೆಗೆ 17 ಮೃತದೇಹ ಪತ್ತೆಯಾಗಿವೆ. 15ಕ್ಕೂ ಹೆಚ್ಚು ಜೆಸಿಬಿ ಬಳಸಿ ಕಾರ್ಯಾಚರಣೆ ಮುಂದುವರಿಸಲಾಗಿದೆ.

ವಯನಾಡಿನ ಪುತ್ತುಮಲೆಯಲ್ಲಿ ಇನ್ನೂ 7 ಮಂದಿ ಪತ್ತೆ ಹಚ್ಚಬೇಕಾಗಿದೆ. ರಾಜ್ಯದಲ್ಲಿ ಒಟ್ಟು 1326 ಸಂತ್ರಸ್ತರ ಶಿಬಿರ ತೆರೆಯಲಾಗಿದ್ದು, 2,50,638 ಮಂದಿಗೆ ವಾಸ್ತವ್ಯ ಕಲ್ಪಿಸಲಾಗಿದೆ. ನೆರೆಹಾವಳಿಗೆ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 89ಕ್ಕೇರಿದೆ. ಆ.17ರವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆಹಾರ ವಿಷಬಾಧೆ: ವಯನಾಡಿನ ನಿರ್ವಾರಂ ಶಾಲೆಯ ಸಂತ್ರಸ್ತರ ಶಿಬಿರದಲ್ಲಿ ವಿಷಾಹಾರ ಸೇವನೆಯಿಂದ 20 ಮಕ್ಕಳ ಸಹಿತ 30 ಮಂದಿ ಅಸೌಖ್ಯಕ್ಕೊಳಗಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾರಾಷ್ಟ್ರದಲ್ಲಿ ಮೃತರ ಸಂಖ್ಯೆ 43ಕ್ಕೇರಿಕೆ: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದಾಗಿ ಸತ್ತವರ ಸಂಖ್ಯೆ 43ಕ್ಕೆ ಏರಿದೆ. ಸಾಂಗ್ಲಿ, ಕೊಲ್ಲಾಪುರ, ಪುಣೆ ಹಾಗೂ ಸತಾರಾ ಭಾಗದಲ್ಲಿ ಒಟ್ಟು 5.60 ಲಕ್ಷ ಜನರು ನಿರಾಶ್ರಿತರಾಗಿದ್ದು, 61 ಸಾವಿರ ಜಾನುವಾರುಗಳನ್ನು ರಕ್ಷಿಸಲಾಗಿದೆ. ಉತ್ತರಾಖಂಡದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Leave a Reply

Your email address will not be published. Required fields are marked *