ಮೈಸೂರು: ಕಬ್ಬಿಣದ ಊರುಗೋಲಿನಿಂದ ತುಂಬು ಗರ್ಭಿಣಿ ಪತ್ನಿ, ಇಬ್ಬರು ಮಕ್ಕಳು, ತಾಯಿಯನ್ನು ಹೊಡೆದು ಕೊಲೆ ಮಾಡಿದ ಅಪರಾಧಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
ಸರಗೂರು ತಾಲೂಕು ಚಾಮೇಗೌಡನಹುಂಡಿ ಗ್ರಾಮದ ಮಣಿಕಂಠಸ್ವಾಮಿ ಅಲಿಯಾಸ್ ಕುಂಟ ಶಿಕ್ಷೆಗೆ ಗುರಿಯಾದ ಅಪರಾಧಿ.
ಅಂಗವಿಕಲನಾಗಿದ್ದ ಮಣಿಕಂಠಸ್ವಾಮಿ ಅಲಿಯಾಸ್ ಕುಂಟ 2014ನೇ ಮಾರ್ಚ್‌ನಲ್ಲಿ ಗಂಗೆ ಎಂಬಾಕೆಯನ್ನು ವಿವಾಹವಾಗಿದ್ದ. ಆತನಿಗೆ 4 ವರ್ಷದ ಸಾಮ್ರಾಟ್ ಮತ್ತು ಒಂದೂವರೆ ವರ್ಷದ ರೋಹಿತ್ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಅಲ್ಲದೆ ಆತನ ಹೆಂಡತಿ 9 ತಿಂಗಳ ಗರ್ಭಿಣಿಯಾಗಿದ್ದಳು. ಆತ ತನ್ನ ಪತ್ನಿ ಶೀಲದ ಮೇಲೆ ಅನುಮಾನಪಟ್ಟು ಪದೇ ಪದೆ ಜಗಳವಾಡುತ್ತಿದ್ದ.
2021ರ ಸಂಜೆ 6 ಗಂಟೆ ಸಮಯದಲ್ಲಿ ಪತ್ನಿ ಶೀಲ ಶಂಕಿಸಿ ಆಕೆಯೊಂದಿಗೆ ಮತ್ತು ತನ್ನ ತಾಯಿ ಕೆಂಪಾಜಮ್ಮನೊಂದಿಗೆ ಜಗಳವಾಡಿದ್ದ. ಎಲ್ಲರೂ ಮಲಗಿದ್ದಾಗ ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ತಾನು ನಡೆದಾಡಲು ಉಪಯೋಗಿಸುತ್ತಿದ್ದ ಅಂಗವಿಕಲರ ಕಬ್ಬಿಣದ ಊರುಗೋಲಿನಿಂದ ಒಂಬತ್ತು ತಿಂಗಳ ಗರ್ಭಿಣಿ ಗಂಗೆ, ತಾಯಿ ಕೆಂಪಾಜಮ್ಮ, ನಾಲ್ಕು ವರ್ಷದ ಮಗ ಸಾಮ್ರಾಟ್ ತಲೆಗೆ ಮುಖಕ್ಕೆ ಬಲವಾಗಿ ಹೊಡೆದು ಸಾಯಿಸಿದ್ದಲ್ಲದೆ, ಇನ್ನೊಬ್ಬ ಒಂದೂವರೆ ವರ್ಷದ ಮಗ ರೋಹಿತ್‌ನ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆಗೈದಿದ್ದ. ಪತ್ನಿಯ ಗರ್ಭದಲ್ಲಿದ್ದ ಮಗುವಿನ ಸಾವಿಗೂ ಕಾರಣವಾಗಿದ್ದ. ಈ ಬಗ್ಗೆ ಸರಗೂರು ಪೊಲೀಸರು ಎಫ್‌ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ನಗರದ ಐದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಗುರುರಾಜ್ ಸೋಮಕ್ಕನವರ್ ಅವರು ಅಪರಾಧಿಯಾದ ಮಣಿಕಂಠ ಸ್ವಾಮಿ ಆರೋಪ ಸಾಬೀತಾಗಿದ್ದರಿಂದ ಮರಣದಂಡನೆ ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಇ.ಯೋಗೇಶ್ವರ್, ಪ್ರಧಾನ ಕಾನೂನು ಸೇವಾ ಅಭಿರಕ್ಷಕ ಮಾಚಂಗಡ ಎಸ್. ನವೀನ್ ವಕಾಲತು ವಹಿಸಿದ್ದರು.
