ಸಾವಿನಲ್ಲೂ ಸಾರ್ಥಕತೆ ಮೆರೆದ ಶಾರದಾ ತಾಯಿ

ಬೆಳಗಾವಿ: ಹಿಂಡಲಗಾದ ಲಿಂಗರಾಜ ಕಾಲನಿ ನಿವಾಸಿ ಶಾರದಾ ಚಂದ್ರಶೇಖರ ಸಬರದ(95) ಚರ್ಮ ಹಾಗೂ ದೇಹದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾರೆ.

ಶಾರದಾ ಸಬರದ ಬುಧವಾರ ನಿಧನರಾಗಿದ್ದು, ಓರ್ವ ಪುತ್ರ, ಐವರು ಪುತ್ರಿಯರು ಇದ್ದಾರೆ. ಮರಣದ ಮುನ್ನವೇ ಚರ್ಮ ದಾನ ಮಾಡುವ ಬಗ್ಗೆ ಘೋಷಿಸಿದ್ದರಿಂದ ಇವರ ಪುತ್ರ ರಾಜೇಂದ್ರ ತಾಯಿಯ ದೇಹವನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ದಾನ ಮಾಡಿದ್ದಾರೆ.

ಆಸ್ಪತ್ರೆ ಮುಖ್ಯ ಪ್ಲಾಸ್ಟಿಕ್ ಸರ್ಜನ್ ಹಾಗೂ ಸ್ಕೀನ್ ಬ್ಯಾಂಕ್ ಮುಖ್ಯಸ್ಥ ಡಾ. ರಾಜೇಶ ಪವಾರ ನೇತೃತ್ವದ ತಂಡ ವೈದ್ಯಕೀಯ ಮಾನದಂಡದಂತೆ ದಾನ ಮಾಡಿದ ಚರ್ಮವನ್ನು ಸಂಗ್ರಹಿಸಿದೆ. ಶಾರದಾ ಅವರ ಅಂತಿಮ ಇಚ್ಛೆಯಂತೆ ದೇಹವನ್ನು ನಗರದ ಯಳ್ಳೂರ ರಸ್ತೆಯ ಕೆಎಲ್‌ಇ ಸಂಸ್ಥೆಯ ಹೋಮಿಯೋಪಥಿ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗಿದೆ. ಕಾಲೇಜಿನ ಪ್ರಾಂಶುಪಾಲ ಡಾ. ಮುಕುಂದ ಉಡಚಣಕರ ಮೃತದೇಹವನ್ನು ಸ್ವೀಕರಿಸಿದರು.

ಚರ್ಮ ಸಂಗ್ರಹದ ಉದ್ದೇಶ: ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ರೋಟರಿ ಸ್ಕಿನ್ ಬ್ಯಾಂಕ್ ಮೃತ ದೇಹದಿಂದ ವೈಜ್ಞಾನಿಕವಾಗಿ ಚರ್ಮ ಸಂಗ್ರಹ ಮಾಡಿ ಅದನ್ನು ಬೆಂಕಿ ಅವಘಡದಿಂದ ಸುಟ್ಟ ಗಾಯದಿಂದ ನರಳುತ್ತಿರುವವರ ಚಿಕಿತ್ಸೆಗೆ ಬಳಸುತ್ತಾರೆ. ದಾನಿಗಳಿಂದ ಚರ್ಮವನ್ನು ಮರಣ ಹೊಂದಿದ 6 ಗಂಟೆಯೊಳಗೆ ಸಂಗ್ರಹಿಸಲಾಗುತ್ತದೆ.

ನೇತ್ರ ಹಾಗೂ ದೇಹದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟಬಲ್ ಟ್ರಸ್ಟ್‌ನ ಡಾ. ಮಹಾಂತೇಶ ರಾಮಣ್ಣವರ ಚರ್ಮದಾನದ ಕುರಿತೂ ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಪ್ರಯತ್ನದ ಫಲವಾಗಿ ಇಲ್ಲಿಯವರೆಗೆ ಬೆಳಗಾವಿಯಲ್ಲಿ ಇಬ್ಬರು ಚರ್ಮ ದಾನ ಮಾಡಿ ಇತರರಿಗೆ ಪ್ರೇರಣೆಯಾಗಿದ್ದಾರೆ.

ವಿಜಯಪುರದ ತಿಕೋಟಾ ಗ್ರಾಮದ ರೂಪಾ ಕುಡವಕ್ಕಲಗಿ ಇವರು ಕೆಎಲ್‌ಇ ರೋಟರಿ ಚರ್ಮ ಭಂಡಾರಕ್ಕೆ ಅ. 29 ರಂದು ಚರ್ಮ ದಾನ ಮಾಡಿದ್ದರು. ಚರ್ಮ ದಾನದ ಮಾಹಿತಿಗೆ ಮೊ.ನಂ. 9242496497 ಸಂಪರ್ಕಿಸಬಹುದು.