ಅನಾರೋಗ್ಯದಿಂದ ಪತ್ನಿ ಸಾವು, ಫೈನಾನ್ಸ್ ಕಂಪನಿ ಕಿರುಕುಳಕ್ಕೆ ಹೆದರಿ ಪತಿ ನೇಣಿಗೆ ಶರಣು

ಮಂಡ್ಯ: ಫೈನಾನ್ಸ್ ಕಂಪನಿಯ ಕಿರುಕುಳಕ್ಕೆ ಹೆದರಿ ವ್ಯಕ್ತಿಯೋರ್ವ ನೇಣಿಗೆ ಶರಣಾಗಿರುವ ಘಟನೆ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯಲ್ಲಿ ನಡೆದಿದೆ.

ನಿನ್ನೆಯಷ್ಟೇ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತ್ನಿಯ ಶವಸಂಸ್ಕಾರಕ್ಕೆ ಬಂದಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಫೈನಾನ್ಸ್‌ ಕಂಪನಿ ನೌಕರರು ಆತನನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ. ಈ ವೇಳೆ ಪ್ರದೀಪ್ ಅವರ ತಾಯಿ ಮತ್ತು ನಾದಿನಿಯನ್ನು ಕಾರಿನಲ್ಲಿ ಬಲವಂತವಾಗಿ ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ.

ಇದರಿಂದ ಹೆದರಿಕೊಂಡು ಇದೇ ಸಂದರ್ಭದಲ್ಲಿ ಪ್ರದೀಪ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಸುಂಕದಕಟ್ಟೆಯಲ್ಲಿ ವ್ಯವಹಾರ ನಡೆಸಲು ಫೈನಾನ್ಸ್ ಕಂಪನಿಯೊಂದರಿಂದ ಪ್ರದೀಪ್‌ ಸಾಲ ಪಡೆದಿದ್ದರು. ಇದೀಗ ಪೈನಾನ್ಸ್ ಕಂಪನಿಯವರನ್ನು ಕೆಸ್ತೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.

ಮೃತರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ತಾಯಿ ರೇಣುಕಮ್ಮ ಇದ್ದಾರೆ. ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *