ಸೌಪರ್ಣಿಕೆಯಲ್ಲಿ ಜಲಚರಗಳ ಮಾರಣಹೋಮ

ಕುಂದಾಪುರ: ಅಗ್ನಿತೀರ್ಥ, ಕಾಶಿ ತೀರ್ಥವಷ್ಟೇ ಅಲ್ಲ, ಔಷಧೀಯ ಗುಣಗಳ 64 ತೀರ್ಥಗಳ ಸಮುಚ್ಚಯವಿರುವ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಳಿ ಹರಿಯುವ ಸೌಪರ್ಣಿಕಾ ನದಿ ನೀರು ವಿಷವಾಗುತ್ತಿದೆಯೇ ಎಂಬ ಅನುಮಾನ ದಟ್ಟವಾಗುತ್ತಿದೆ.

ಶುಕ್ರವಾರ ಬೆಳಗ್ಗೆ ನದಿಯಲ್ಲಿ ಮೀನುಗಳು, ಹಾವು ಹಾಗೂ ಜಲಚರಗಳು ಸತ್ತು ತೇಲುತ್ತಿರುವುದು ಕಂಡುಬಂದಿದೆ. ನೀರು ಹರಿವು ನಿಲ್ಲಿಸಿ, ಅಲ್ಲಲ್ಲಿರುವ ಹೊಂಡಗಳಲ್ಲಿ ನಿಂತ ನೀರು ಬಿಸಿಯಾಗಿದೆ. ಆಮ್ಲಜನಕ ಕೊರತೆ, ನೀರು ವಿಷವಾಗಿರುವ ಕಾರಣದಿಂದ ಹೀಗಾಗಿರಬಹುದು ಎಂದು ಶಂಕಿಸಲಾಗಿದೆ.

ರಾಸಾಯನಿಕ ಬಳಸಿ ವಸತಿಗೃಹಗಳ ಬಟ್ಟೆಗಳನ್ನು ತೊಳೆಯುವುದು, ಅನ್ನ ದಾಸೋಹದ ಕುದಿ ಅನ್ನದ ತಿಳಿಯನ್ನೂ ನದಿಗೆ ಬಿಡುತ್ತಿರುವುದು, ಕೊಲ್ಲೂರು ಸಮಸ್ತ ಪಾಪಕೂಪಗಳನ್ನು ನದಿಗೆ ಹರಿಸುವುದರಿಂದ ನೀರು ವಿಷವಾಗುತ್ತಿದೆ. ವಸತಿ ಸಮುಚ್ಚಯಗಳು ತ್ಯಾಜ್ಯ ಶುದ್ಧೀಕರಿಸಿ ಬಿಡಬೇಕೆಂಬ ನಿಯಮವಿದ್ದರೂ ಪಾಲನೆ ಆಗುತ್ತಿಲ್ಲ. ಸೌಪರ್ಣಿಕಾ ನದಿ ಮಲಿನದಲ್ಲಿ ಎಲ್ಲರ ಪಾಲೂ ಇದೆ.

‘ನದಿ ಕುಲಷಿತಗೊಳ್ಳಲು ತಾಜ್ಯ ಬಿಡುವುದೇ ಪ್ರಮುಖ ಕಾರಣ. ನೀರಲ್ಲಿ ಆಮ್ಲಜನಕದ ಕೊರತೆ, ನದಿ ಪಾತ್ರದ ಹೊಂಡದ ನೀರು ಬಿಸಿಯಾಗುತ್ತಿರುವುದು ಕೂಡ ಜಲಚರಗಳ ಸಾವಿಗೆ ಕಾರಣವಾಗುತ್ತಿದೆ. ಇದೇ ನೀರನ್ನು ಕುಡಿಯುವ ವನ್ಯಜೀವಿಗಳಿಗೂ ಆಪತ್ತು ಸಾಧ್ಯತೆ ಇದೆ. ಒಳಚರಂಡಿ ವ್ಯವಸ್ಥೆ ಕೊಲ್ಲೂರಿನಲ್ಲಿ ಪೂರ್ಣವಾಗಿಲ್ಲ’ ಎಂದು ಕೊಲ್ಲೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸದಸ್ಯ ಸಂದೀಪ್ ಕೊಲ್ಲೂರು ಹೇಳುತ್ತಾರೆ.

ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ: ವಸತಿ ಸಮುಚ್ಚಯ, ಅಂಗಡಿ ಮುಂಗಟ್ಟು ನೀರು ಬಿಡುವ ಜತೆ ಅನ್ನ ಬಸಿದ ಬಿಸಿ ತಿಳಿ ಎಲ್ಲವೂ ಸೇರಿ ಸೌಪರ್ಣಿಕಾ ನದಿ ನೀರು ವಿಷವಾಗುತ್ತಿರುವುದೇ ಜಲಚರಗಳ ಸಾವಿಗೆ ಕಾರಣ. ಪವಿತ್ರ ನದಿ ಕಲುಷಿತವಾಗುತ್ತಿರುವುದು ಬೇಸರ ಸಂಗತಿ. ಕೊಲ್ಲೂರು ಮಾಲಿನ್ಯದ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೊಲ್ಲೂರಿನ ಧಾರ್ಮಿಕ ಕಾರ‌್ಯಕರ್ತ ಹರೀಶ್ ತೋಳಾರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *