ಪತ್ನಿ ಹಂತಕನಿಗೆ ಮುಳ್ಳಾಯ್ತು ಆಕೆಯ ಉಗುರು: ಡಿಎನ್​ಎ ಪರೀಕ್ಷೆಯಿಂದ ಜೀವಾವಧಿ ಶಿಕ್ಷೆ

ಹಾಸನ: ಪತ್ನಿಯನ್ನು ಕೊಲೆಗೈದು ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ನಂಬಿಸಿದ್ದ ಪತಿಗೆ ಆಕೆಯ ಉಗುರು ಕಂಟಕವಾಗಿ ಪರಿಣಮಿಸಿ, ಈಗ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.

ಇದೊಂದು ಇಂಟರೆಸ್ಟಿಂಗ್ ಕತೆ. 2015ರ ಮಾರ್ಚ್​ನಲ್ಲಿ ಮಲ್ಲಿಕಾರ್ಜುನ ನಗರದಲ್ಲಿ ಗೀತಾ ಎಂಬುವರು ಮೃತಪಟ್ಟಿದ್ದರು. ಆಕೆಯ ಪತಿ ಸುರೇಶ್​ ಗೀತಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಹೇಳಿ ಅವಳ ತವರುಮನೆಯಲ್ಲಿ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದ. ಆದರೆ, ಅಂತ್ಯಕ್ರಿಯೆ ಹಂತದಲ್ಲಿ ಸಕಲೇಶಪುರ ಪೊಲೀಸರು ಅನುಮಾನಗೊಂಡು ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೆ, ಉಗುರನ್ನೂ ಡಿಎನ್​ಎ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಗೀತಾಳ ತಂದೆ-ತಾಯಿಯೂ ಸುರೇಶ್​ ಪರವಾಗಿಯೇ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು. ಆದರೆ, ಗೀತಾಳ ಉಗುರನ್ನು ಡಿಎನ್​ಎ ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಸುರೇಶ್​ನ ಚರ್ಮದ ಅಂಶ ಪತ್ತೆಯಾಗಿತ್ತು. ನಂತರ ಆಕೆಯ ಸಾವಿನ ಸತ್ಯವೂ ಹೊರಬಂದಿತ್ತು.
ಟಿಂಬರ್​ ವ್ಯಾಪಾರಿ ಸುರೇಶ್​ ಮಡದಿಯೊಂದಿಗೆ ಜಗಳವಾಡಿಕೊಂಡು ಆಕೆಯನ್ನು ತಲೆದಿಂಬಿನಿಂದ ಉಸಿರುಕಟ್ಟಿಸಿ ಹತ್ಯೆಗೈದಿದ್ದ. ಆತ ತಲೆದಿಂಬನ್ನು ಮೂಗಿಗೆ ಹಿಡಿದು ಒತ್ತಿದಾಗ ತಪ್ಪಿಸಿಕೊಳ್ಳಲು ಗೀತಾ ಸುರೇಶ್​ನ ಮುಖವನ್ನು ಪರಚಿದ್ದಳು. ಆ ವೇಳೆ ಉಗುರಿನಲ್ಲಿ ಸುರೇಶ್​ನ ಚರ್ಮ ಅಂಟಿಕೊಂಡಿತ್ತು.

ದೀರ್ಘಾವಧಿ ತನಿಖೆ, ವಿಚಾರಣೆ ಬಳಿಕ ಇಂದು ಹಾಸನದ 5ನೇ ಸೆಷನ್​ ನ್ಯಾಯಾಲಯ ಸುರೇಶ್​ಗೆ ಇಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.