More

    ಖಾಸಗಿ ಶಾಲೆಗಳ ಶುಲ್ಕ ಪ್ರಕಟಿಸಲು ಡೆಡ್​ಲೈನ್

    ಬೆಂಗಳೂರು: ರಾಜ್ಯದಲ್ಲಿರುವ ಖಾಸಗಿ ಶಾಲೆಗಳು ಪಡೆಯುವ ಶುಲ್ಕವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್​ಸೈಟ್​ನಲ್ಲಿ ಪ್ರಕಟಿಸಲು ನಿಗದಿ ಪಡಿಸಿದ್ದ ದಿನಾಂಕವನ್ನು ಜ.31ರವರೆಗೆ ವಿಸ್ತರಿಸಲಾಗಿದೆ.

    ಖಾಸಗಿ ಶಾಲೆಗಳು ಪ್ರವೇಶದ ಹೆಸರಿನಲ್ಲಿ ಪಾಲಕರಿಂದ ಸಾಕಷ್ಟು ಶುಲ್ಕ ವಸೂಲಿ ಮಾಡುವ ದೂರುಗಳು ಬಂದ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳು ಶುಲ್ಕದ ಮಾಹಿತಿಯನ್ನು ಡಿ.31ರೊಳಗೆ ವೆಬ್​ಸೈಟ್, ಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿತ್ತು. ಆದರೆ, ಶುಲ್ಕ ಪ್ರಕಟಿಸಿ ಎಂದು ಹೇಳುವುದನ್ನು ನಾವು ಪಾಲಿಸಲು ಸಾಧ್ಯವಿಲ್ಲ. ಷರತ್ತುಗಳನ್ನು ಸಡಿಲ ಮಾಡಿಲ್ಲವಾದರೆ ಶುಲ್ಕ ನಿಗದಿ ಮಾಡುವುದು ಕಷ್ಟವೆಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಈಗಾಗಲೆ ಇಲಾಖೆಗೆ ಪತ್ರ ಬರೆದು ತಿಳಿಸಿದೆ.

    ಡಿಸೆಂಬರ್ ಕಳೆದರೂ ಖಾಸಗಿ ಶಾಲೆಗಳು ಶುಲ್ಕ ಪಟ್ಟಿ ಪ್ರಕಟಿಸದೆ ಇರುವುದರಿಂದ ಕೊನೆಯ ದಿನವನ್ನು ವಿಸ್ತರಿಸಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಎಸ್​ಎಟಿಎಸ್​ನಲ್ಲಿ ಯೂಸರ್ ಐಡಿ ಮತ್ತು ಪಾಸ್​ವರ್ಡ್ ಬಳಸಿಕೊಂಡು ಶಾಲೆಗಾಗಿಯೇ ಸಿದ್ಧ ಪಡಿಸಿರುವ ಡ್ಯಾಶ್ ಬೋರ್ಡ್​ನಲ್ಲಿ 2020-21ನೇ ಸಾಲಿನಲ್ಲಿ ವಿಧಿಸಬಹುದಾದ ಶುಲ್ಕದ ಮಾಹಿತಿ ಪ್ರಕಟಿಸಬೇಕು.

    ಶುಲ್ಕದ ವಿವರ: ಪೂರ್ವ ಪ್ರಾಥಮಿಕದಿಂದ ಪಿಯು ವರೆಗೆ ಬೋಧನಾ ಶುಲ್ಕ, ಅವಧಿ ಶುಲ್ಕ, ವಿಶೇಷ ಅಭಿವೃದ್ಧಿ ಶುಲ್ಕ ಸೇರಿ ಒಟ್ಟಾರೆ ಶುಲ್ಕದ ಮಾಹಿತಿಯನ್ನು ಪ್ರಕಟಿಸಬೇಕಿದೆ. ಅಲ್ಲದೆ, ಕಳೆದ ಮೂರು ವರ್ಷದಲ್ಲಿ ಪಬ್ಲಿಕ್ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆದಿರುವ ಫಲಿತಾಂಶವನ್ನೂ ಪ್ರಕಟಿಸಬೇಕೆಂದು ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ 19,645 ಖಾಸಗಿ ಶಾಲೆಗಳಿದ್ದು, ಇದರಲ್ಲಿ 45.71 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

    ಪ್ರಕರಣ ಇನ್ನೂ ಕೋರ್ಟ್​ನಲ್ಲಿದೆ

    ಕರ್ನಾಟಕ ಶಿಕ್ಷಣ ಸಂಸ್ಥೆಗಳು (ವರ್ಗೀಕರಣ ಮತ್ತು ನಿಯಂತ್ರಣ) ಕಾಯ್ದೆ 1995ರ ನಿಯಮ 10(4) ಹಾಗೂ 14(2)ರ ಅನ್ವಯ ಎಲ್ಲ ಶಾಲೆಗಳ ಮುಂದೆ ಶುಲ್ಕದ ವಿವರ, ವಿದ್ಯಾರ್ಥಿಗಳ ಸಂಖ್ಯೆ, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಅವರಿಗೆ ನೀಡುವ ವೇತನ ಇನ್ನಿತರ ಮಾಹಿತಿಗಳನ್ನೊಳಗೊಂಡ ಸೂಚನಾ ಫಲಕ ಅಳವಡಿಸುವುದು ಕಡ್ಡಾಯವಾಗಿದೆ. ಈ ಸಂಬಂಧ ಶಿಕ್ಷಣ ಇಲಾಖೆ 2015ರಲ್ಲೇ ಸುತ್ತೋಲೆ ಹೊರಡಿಸಿದೆ. ಆದರೆ, ಹಲವು ಶಾಲೆಗಳು ಈವರೆಗೂ ಫಲಕ ಅಳವಡಿಸಿಲ್ಲ. ಹೀಗಾಗಿ ಈ ಕುರಿತು ಕ್ರಮಕ್ಕೆ ಮುಂದಾಗಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರೊಬ್ಬರು ಹೈಕೋರ್ಟ್​ನಲ್ಲಿ ದೂರು ದಾಖಲಿಸಿದ್ದರು. ಹಲವಾರು ಬಾರಿ ವಿಚಾರಣೆಗೆ ಬಂದರೂ ಅಂತಿಮ ತೀರ್ಪು ಹೊರ ಬಿದ್ದಿಲ್ಲ. ಶಿಕ್ಷಣ ಇಲಾಖೆಯು ಹೆಚ್ಚಿನ ಗಮನವಹಿಸುತ್ತಿಲ್ಲ.

    ರಾಜ್ಯ ಸರ್ಕಾರ 6ನೇ ವೇತನ ಜಾರಿ ಮಾಡಿ ಎಂದು ಹೇಳುತ್ತದೆ. ಅದನ್ನು ಅನುಷ್ಠಾನ ಮಾಡಿದರೆ ಶುಲ್ಕ ಹೆಚ್ಚಳ ಮಾಡಬೇಕಾಗುತ್ತದೆ. ಯಾವ ಮಾನದಂಡದ ಮೇಲೆ ಶುಲ್ಕ ಲೆಕ್ಕಾಚಾರ ಮಾಡಬೇಕೆಂಬುವುದೇ ದೊಡ್ಡ ಸಮಸ್ಯೆ.

    | ಡಿ.ಶಶಿಕುಮಾರ್ ಪ್ರಧಾನ ಕಾರ್ಯದರ್ಶಿ, ಕ್ಯಾಮ್ಸ್​ ಸಂಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts