ಚುನಾವಣಾ ಸಿಬ್ಬಂದಿ ಉಪಾಹಾರದಲ್ಲಿ ಸತ್ತ ಹಲ್ಲಿ

>

ವಿಜಯವಾಣಿ ಸುದ್ದಿಜಾಲ ಪುತ್ತೂರು/ಕಡಬ
ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲಾ ಮತಗಟ್ಟೆ ಸಿಬ್ಬಂದಿಯೊಬ್ಬರು ಸೇವಿಸುತ್ತಿದ್ದ ಆಹಾರದಲ್ಲಿ ಸತ್ತ ಹಲ್ಲಿ ಕಂಡ ಇನ್ನೋರ್ವ ಸಿಬ್ಬಂದಿ ವಾಂತಿ ಮಾಡಿ ಅಸ್ವಸ್ಥರಾದರು.

ಐವರ್ನಾಡು ನಿವಾಸಿ ಜಯಪ್ರಕಾಶ್ ಗೌಡ(35), ಬೆಳ್ಳಾರೆ ನಿವಾಸಿ ರಾಜೇಂದ್ರ(45) ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗ್ಗಿನ ಉಪಾಹಾರವಾಗಿ ಸಮೀಪದ ಹೊಟೇಲಿನಿಂದ ಇಡ್ಲಿ ಸಾಂಬಾರು ಚಹಾ, ಕಾಫಿ ತರಿಸಲಾಗಿತ್ತು. ಕೆಲ ಅಧಿಕಾರಿಗಳು ಇದೇ ಆಹಾರ ಸೇವಿಸಿದ ಬಳಿಕ ಮತಗಟ್ಟೆ ಮುಖ್ಯ ಅಧಿಕಾರಿ ಸೇರಿದಂತೆ ಜಯಪ್ರಕಾಶ್ ಮತ್ತು ರಾಜೇಂದ್ರ ಆಹಾರ ಸೇವಿಸುತ್ತಿದ್ದಾಗ ತಟ್ಟೆಗೆ ಹಾಕಲಾದ ಸಾಂಬಾರಿನಲ್ಲಿ ಸತ್ತ ಹಲ್ಲಿ ಪತ್ತೆಯಾಯಿತು. ಆರಂಭದಲ್ಲಿ ಸಾಂಬಾರಿಗೆ ಬಳಸಲಾಗುವ ಒಣ ಮೆಣಸು ಎಂದುಕೊಂಡಿದ್ದರೂ, ಸಂಶಯಗೊಂಡು ಪರಿಶೀಲಿಸಿದಾಗ ಸತ್ತ ಹಲ್ಲಿ ಎಂಬುದು ತಿಳಿಯಿತು ಎಂದು ಕರ್ತವ್ಯದಲ್ಲಿದ್ದ ಇತರ ಸಿಬ್ಬಂದಿ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ವಿಜಯವಾಣಿ ಜತೆ ಮಾತನಾಡಿದ ಅವರು, ಜಯಪ್ರಕಾಶ್ ಗೌಡ, ರಾಜೇಂದ್ರ, ನಾವು ಆಹಾರ ಸೇವಿಸಿದ ನಂತರ ಪಿಆರ್‌ಒ ಅವರು ಆಹಾರ ತಟ್ಟೆಗೆ ಹಾಕುವ ಸಂದರ್ಭ ಹಲ್ಲಿ ಗಮನಕ್ಕೆ ಬಂತು ಎಂದು ತಿಳಿಸಿದ್ದಾರೆ. ಆದರೆ ಮತಗಟ್ಟೆಯಲ್ಲಿ ಕರ್ತವ್ಯದಲ್ಲಿದ್ದ ಪಿಆರ್‌ಒ, ಆಹಾರದಲ್ಲಿ ಹಲ್ಲಿ ಬಿದ್ದ ವಿಚಾರ ಮೊದಲು ನಮಗೆ ತಿಳಿದಿರಲಿಲ್ಲ, ಜಯಪ್ರಕಾಶ್ ಗೌಡ, ರಾಜೇಂದ್ರ ಅವರು ವಾಂತಿ ಮಾಡಿದ ಹಾಗೆ ವರ್ತಿಸುತ್ತಿದ್ದರು. ವಿಚಾರಿಸಿದಾಗ ಬಟ್ಟಲಲ್ಲಿ ಹಲ್ಲಿ ಇರುವುದನ್ನು ತಿಳಿಸಿದ್ದರು ಎಂದರು. ಸಿಬ್ಬಂದಿ ದ್ವಂದ್ವ ಹೇಳಿಕೆ ಅನುಮಾನಕ್ಕೆ ಎಡೆಮಾಡಿದೆ.

Leave a Reply

Your email address will not be published. Required fields are marked *