70 ದಿನಗಳ ಬಳಿಕ ಸೌದಿಯಿಂದ ಉಡುಪಿ ತಲುಪಿದ ಹೆಝಲ್ ಶವ

ಉಡುಪಿ: ಸೌದಿ ಅರೇಬಿಯಾ ಆರೋಗ್ಯ ಇಲಾಖೆ ಆಸ್ಪತ್ರೆ ವಸತಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಶಿರ್ವ ಸಮೀಪದ ಕುತ್ಯಾರಿನ ಹೆಝಲ್ ಜೋತ್ನ್ಸಾ ಕ್ವಾಡ್ರಸ್ ಮೃತದೇಹ ಬರೋಬ್ಬರಿ 70 ದಿನಗಳ ಬಳಿಕ ಗುರುವಾರ ತವರೂರು ತಲುಪಿದೆ.
ಗಲ್ಫ್ ಏರ್‌ವೇಸ್ ಕಾರ್ಗೋ ಮೂಲಕ ಪಾರ್ಥಿವ ಶರೀರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಸಾಯಂಕಾಲ 5 ಗಂಟೆಗೆ ಶವಪೆಟ್ಟಿಗೆಯನ್ನು ಮಣಿಪಾಲಕ್ಕೆ ತಂದು ಶವಾಗಾರದಲ್ಲಿ ಇರಿಸಲಾಗಿದೆ.

ಶುಕ್ರವಾರ 12.30ಕ್ಕೆ ಮೃತದೇಹವನ್ನು ಸ್ವಗೃಹಕ್ಕೆ ಕೊಂಡೊಯ್ಯಲಾಗುತ್ತದೆ. ಬಳಿಕ 4 ಗಂಟೆಗೆ ಶಿರ್ವ ಆರೋಗ್ಯ ಮಾತಾ ಚರ್ಚ್‌ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಸಮೀಪವರ್ತಿಗಳು ತಿಳಿಸಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಅವರ ಕುಟುಂಬದ ಪವರ್ ಆಫ್ ಅಟಾರ್ನಿ ಹೋಲ್ಡರ್ ಡೆನ್ನಿಸ್ ನೊರೋನ್ಹಾ, ಹೆಝಲ್ರ ಪಾರ್ಥಿವ ಶರೀರವನ್ನು ತಾಯ್ನಡಿಗೆ ತರಲು ಪ್ರಯತ್ನಿಸುತ್ತಿದ್ದರು. ಸೌದಿಯ ಅಲ್ ಮಿಕ್ವಾ ಆಸ್ಪತ್ರೆಯಲ್ಲಿ ಸಂಶಯಾಸ್ಪದ ಸಾವನ್ನಪ್ಪಿದ್ದ ಹೆಝಲ್ ಡೆತ್ ನೋಟ್ನಲ್ಲಿ ಸಹೋದ್ಯೋಗಿ ಕಿರುಕುಳದ ಬಗ್ಗೆ ಪ್ರಸ್ತಾಪಿಸಿದ್ದರು ಎನ್ನಲಾಗಿದೆ. ಸೌದಿ ಪೊಲೀಸರು ಈ ವ್ಯಕ್ತಿಯನ್ನು ಬಂಧಿಸಿ, ಕಾನೂನು ಪ್ರಕ್ರಿಯೆ ಮುಗಿದಿರುವುದರಿಂದ ಹೆಝಲ್ ಪಾರ್ಥಿವ ಶರೀರವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದರು.