ಬೇರೆಲ್ಲೋ ಕೊಲೆ ಮಾಡಿ ಕ್ಯಾನಹಳ್ಳಿ ಗ್ರಾಮದ ಬಳಿ ಶವ ಬಿಸಾಡಿ ಹೋದ ದುಷ್ಕರ್ಮಿಗಳು

ಹಾಸನ: ಬೇರೆಲ್ಲೋ ಕೊಲೆ ಮಾಡಿ ಯುವತಿಯ ಶವವನ್ನು ದುಷ್ಕರ್ಮಿಗಳು ಸಕಲೇಶಪುರ ತಾಲೂಕಿನ ಕ್ಯಾನಹಳ್ಳಿ ಗ್ರಾಮದಲ್ಲಿ ಬಿಸಾಡಿ ಹೋಗಿದ್ದಾರೆ. ಯುವತಿಯ ಶವದ ಕತ್ತಿನ ಸುತ್ತಲೂ ಕಪ್ಪು ವರ್ತುಲ ನಿರ್ಮಾಣವಾಗಿದ್ದು, ಹಗ್ಗ ಅಥವಾ ವೇಲ್​ನಲ್ಲಿ ಕತ್ತುಬಿಗಿದು ಹತ್ಯೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಕೊಲೆಯಾಗಿರುವ ಯುವತಿ ಅಂದಾಜು 26 ವರ್ಷದವಳಾಗಿದ್ದು, ಚೂಡಿದಾರ ಧರಿಸಿದ್ದಾಳೆ. ಎಡಗೈ ಮೇಲೆ ಜೀಸಸ್​ ರಾಜು ಎಂಬ ಹಚ್ಚೆ ಹಾಕಲಾಗಿದೆ. ತಡರಾತ್ರಿಯಲ್ಲಿ ಕಾರಿನಲ್ಲಿ ಶವ ತಂದು ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ತೋಟದೊಳಗೆ ಎಸೆಯಲು ದುಷ್ಕರ್ಮಿಗಳು ಯತ್ನಿಸಿದ್ದಾರೆ ಎನ್ನಲಾಗಿದೆ.

ಸೋಮವಾರ ಬೆಳಗ್ಗೆ ಹಾಲು ಹಾಕುವವರು ಶವವನ್ನು ಗಮನಿಸಿ, ಕ್ಯಾನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಗಮನಕ್ಕೆ ತಂದರು ಎನ್ನಲಾಗಿದೆ. ಈ ಬಗ್ಗೆ ಸಕಲೇಶಪುರ ಟೌನ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.