ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಅನಿರ್ದಿಷ್ಟಾವಧಿ ಮುಂದಕ್ಕೆ

ಚಿತ್ರದುರ್ಗ: ಗೊಂದಲದ ಕಾರಣಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಅನಿರ್ದಿಷ್ಟಾವಧಿ ಕಾಲ ಮುಂದೂಡಲಾಗಿದೆ.

ಶಿಕ್ಷಕರು ತಮಗೆ ಇಚ್ಛಿಸಿದ ಸ್ಥಳಕ್ಕೆ ವರ್ಗಾವಣೆ ಬಯಸಿ ಭಾನುವಾರ ಡಿಡಿಪಿಐ ಕಚೇರಿಯಲ್ಲಿ ಸರದಿಗಾಗಿ ಕಾಯುತ್ತಿದ್ದರು. ಈ ವೇಳೆ ಕೌನ್ಸೆಲಿಂಗ್ ಮುಂದೂಡಿರುವ ವಿಷಯ ಡಿಡಿಪಿಐ ಎ.ಜೆ. ಅಂಥೋಣಿ ಪ್ರಕಟಿಸಿದರು. ಶಿಕ್ಷಕರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ನಿರಾಸೆಯಿಂದ ಹಿಂತಿರುಗಿದರು.

ಕೌನ್ಸೆಲಿಂಗ್‌ಗೆ ಜಿಲ್ಲೆಯಲ್ಲಿ ಒಟ್ಟು 607 ಶಿಕ್ಷಕರ ಪಟ್ಟಿ ಇದ್ದು, ಎ,ಬಿ ಮತ್ತು ಸಿ ವಲಯಗಳೆಂದು ವಿಂಗಡಿಸಿ ಕೌನ್ಸೆಲಿಂಗ್ ನಡೆದಿತ್ತು. ಎ ವಲಯದಲ್ಲಿ 127 ಡಿಮ್ಡ್ ಹುದ್ದೆಗಳಿದ್ದವು. ಶನಿವಾರ ಡಿಡಿಪಿಐ ಕಚೇರಿಯಲ್ಲಿ ಬೆಳಗ್ಗೆ 11ರಿಂದ ಪ್ರಕ್ರಿಯೆ ಆರಂಭವಾಗಿತ್ತು. ಕೌನ್ಸೆಲಿಂಗ್‌ಗೆ ಅವಕಾಶ ಪಡೆದ 466 ಶಿಕ್ಷಕರಲ್ಲಿ ಹುದ್ದೆ ಒಪ್ಪಿಕೊಂಡವರ ಸಂಖ್ಯೆ ಕೇವಲ 140. ಉಳಿದವರು ಸೂಕ್ತ ಸ್ಥಳ ದೊರೆಯಲಿಲ್ಲವೆಂದು ತಿರಸ್ಕರಿಸಿದ್ದರು.

ಕ್ರಮ ಸಂಖ್ಯೆ 365 ತಲುಪಿದಾಗ ಸಿ ವಲಯದ ತಂತ್ರಾಂಶ ಮಧ್ಯಾಹ್ನ ನಂತರ ತೆರೆದುಕೊಂಡಿತು. ಇದರಿಂದ ಹಲವು ಶಿಕ್ಷಕರು ಸಿಟ್ಟಿಗೆದ್ದರು. ಕೌನ್ಸೆಲಿಂಗ್‌ನಲ್ಲಿ ಗೋಲ್‌ಮಾಲ್ ನಡೆದಿದೆ ಎಂದು ಆರೋಪಿಸಿದರು.

ಬೇರೆ ಜಿಲ್ಲೆಗಳಲ್ಲಿ ಸಿ ವಲಯದ ತಂತ್ರಾಂಶವೂ ಬೆಳಗ್ಗೆಯಿಂದಲೇ ಆರಂಭವಾಗಿದೆ. ತಾವು ಬಯಸಿದ ಸ್ಥಳಕ್ಕೆ ವರ್ಗಾವಣೆ ಕೇಳುವುದೇ ತಪ್ಪೇ ಎಂದು ಪ್ರಶ್ನಿಸಿ ಶನಿವಾರ ರಾತ್ರಿ ಕೌನ್ಸೆಲಿಂಗ್ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಒಪ್ಪದ ಇಲಾಖೆ ನಿರ್ದೇಶಕರು ಪ್ರಕ್ರಿಯೆ ಮುಂದುವರಿಸುವಂತೆ ಡಿಡಿಪಿಐಗೆ ಆದೇಶಿಸಿದ್ದರು.

ಶಾಸಕರ ಭೇಟಿ: ಭಾನುವಾರ ಬೆಳಗ್ಗೆ ಕೌನ್ಸೆಲಿಂಗ್ ಸ್ಥಳಕ್ಕೆ ಆಗಮಿಸಿದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಪ್ರಕ್ರಿಯೆ ಮುಂದೂಡುವಂತೆ ಒತ್ತಾಯಿಸಿದರು. ಈ ಹಂತದಲ್ಲೇ ದೂರವಾಣಿ ಕರೆ ಮಾಡಿದ ಇಲಾಖೆ ನಿರ್ದೇಶಕರು ಕೌನ್ಸೆಲಿಂಗ್ ಮುಂದೂಡುವಂತೆ ಆದೇಶಿಸಿ ಹೊಸ ದಿನಾಂಕವನ್ನು ತಿಳಿಸುವುದಾಗಿ ಹೇಳಿದರು.

ಹೆಚ್ಚುವರಿ ಪಟ್ಟಿ ಅವೈಜ್ಞಾನಿಕ: ಎ ವಲಯವೆಂದರೆ ನಗರದಲ್ಲಿರುವ ಹುದ್ದೆಗಳು. ಈಗಾಗಲೇ ಹಲವು ವರ್ಷಗಳಿಂದ ಬೀಡು ಬಿಟ್ಟಿರುವ 107 ಶಿಕ್ಷಕರನ್ನು ಬೇರೆಡೆ ವರ್ಗಾಯಿಸಿ, ಆ ಸ್ಥಳಕ್ಕೆ ಕೌನ್ಸೆಲಿಂಗ್‌ನಲ್ಲಿ ಆಯ್ಕೆಯಾದವರನ್ನು ಭರ್ತಿ ಮಾಡುವುದು. ಬಿ ಎಂದರೆ ನಗರದಿಂದ 10-15 ಕಿ.ಮೀ. ದೂರ ದಲ್ಲಿರುವ ಸ್ಥಳಗಳು. ಸಿ ಎಂದರೆ ನಗರದಿಂದ 30-40 ಕಿ.ಮೀ. ದೂರದ ಶಾಲೆಗಳು. ಸಿ ವಲಯದಲ್ಲಿದ್ದವರು ಸಿ ವಲಯದಲ್ಲೇ ಸ್ಥಳ ಕೋರಬೇಕೇ ಹೊರತು ಬಿ ಅಥವಾ ಎ ಬಯಸುವಂತಿಲ್ಲ. ಆದರೆ, ಈ ನಿಯಮ ಕಾನೂನುಬಾಹಿರ. ಹೆಚ್ಚುವರಿ ಪಟ್ಟಿಯೂ ಅವೈಜ್ಞಾನಿಕ ಎಂದು ಕೆಲ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೆ ಆತಂಕ: ಈಗಾಗಲೇ ಕೌನ್ಸೆಲಿಂಗ್‌ಗೆ ಹಾಜರಾಗಿ ಸ್ಥಳ ಒಪ್ಪಿರುವ 140 ಶಿಕ್ಷಕರ ಗತಿ ಏನೆಂಬ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲ. ಇಡೀ ಪ್ರಕ್ರಿಯೆ ರದ್ದಾಗುತ್ತದೆಯೋ ಅಥವಾ ಇದೇ ಮುಂದುವರಿಯುತ್ತದೆಯೋ ಕಾದು ನೋಡಬೇಕು ಎನ್ನುತ್ತಾರೆ ಅಧಿಕಾರಿಗಳು.

 

ಶಿಕ್ಷಕರ ಕೌನ್ಸೆಲಿಂಗ್ ಮುಂದೂಡಿರುವುದಾಗಿ ಚಿತ್ರದುರ್ಗದಲ್ಲಿ ಡಿಡಿಪಿಐ ಅಂಥೋಣಿ ಪ್ರಕಟಿಸಿದರು. ಬಿಇಒ ನಾಗಭೂಷಣ್, ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ ಮೊದಲಾದವರು ಇದ್ದರು.