ಹಳೇ ಹುಬ್ಬಳ್ಳಿ ಠಾಣೆಗೆ ಡಿಸಿಎಂ ದಿಢೀರ್ ಭೇಟಿ

ಹುಬ್ಬಳ್ಳಿ: ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಸೋಮವಾರ ರಾತ್ರಿ ದಿಢೀರ್ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳ ನೀರಿಳಿಸಿದರು. ನ್ಯೂ ಸಬ್ ಬೀಟ್ ಸಿಸ್ಟಂ ಸರಿಯಾಗಿ ಜಾರಿಗೊಳಿಸಲು ಖಡಕ್ ಆದೇಶ ನೀಡಿದರು. ಸೂಕ್ತ ದಾಖಲೆ ಸಂಗ್ರಹ ಮಾಡದಿದ್ದರೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ರಾತ್ರಿ 10 ಗಂಟೆಗೆ ಠಾಣೆಗೆ ದಿಢೀರ್ ಭೇಟಿ ನೀಡಿ ಮೂಲೆ ಮೂಲೆಗೆ ತೆರಳಿ ಪರಿಶೀಲಿಸಿದರು. ಠಾಣೆ ಸಿಬ್ಬಂದಿ ಹಾಜರಾತಿ ಪುಸ್ತಕ, ದಿನಚರಿ, ಸಬ್ ಬೀಟ್ ಸಿಸ್ಟಂ ದಾಖಲೆ ಪರಿಶೀಲಿಸಿದರು. ಮುದ್ದೆ ಮಾಲು ಕೊಠಡಿ (ಬಂದೂಕು ಸಂಗ್ರಹ ಕೊಠಡಿ), ಶೌಚಗೃಹಕ್ಕೆ ತೆರಳಿ ವೀಕ್ಷಿಸಿದರು. ಶೌಚಗೃಹ ಸ್ವಚ್ಛವಾಗಿಡಲು ಆಗಲ್ಲವಾ ನಿಮಗೆ ಎಂದು ಇನ್ಸ್​ಪೆಕ್ಟರ್ ಮಾರುತಿ ಗುಳ್ಳಾರಿಗೆ ಪ್ರಶ್ನಿಸಿದರು.

ಸಬ್ ಬೀಟ್ ಸಿಸ್ಟಂ ನಕ್ಷೆ ವೀಕ್ಷಿಸಿ ಇದರಲ್ಲಿ ಯಾವುದು ಮುಖ್ಯವಾದ ಬೀಟ್, ಯಾವುದು ಅಭಿವೃದ್ಧಿ ಹೊಂದಿದ ಬೀಟ್ ಎಂದು ಪ್ರಶ್ನಿಸಿದರು. ಉತ್ತರ ನೀಡಲು ಇನ್ಸ್​ಪೆಕ್ಟರ್ ತಡಬಡಾಯಿಸಿದರು. ಬಳಿಕ ಆನಂದ ನಗರ ಸೂಕ್ಷ್ಮ ಪ್ರದೇಶವಾಗಿದ್ದು, ಕೋಟಿಲಿಂಗನಗರ ಉತ್ತಮ ಬೀಟ್ ಆಗಿದೆ ಎಂದರು. ಕೋಟಿಲಿಂಗ ನಗರ ಬೀಟ್​ನ ಸದಸ್ಯರೊಬ್ಬರಿಗೆ ಸ್ಥಳದಲ್ಲೇ ಕರೆ ಮಾಡಿ ಬೀಟ್​ಸಿಸ್ಟಂ ಬಗ್ಗೆ ವಿಚಾರಿಸಿದರು.

ಎಲ್ಲ ಬೀಟ್ ಸಿಬ್ಬಂದಿ ಕಡ್ಡಾಯವಾಗಿ ನಿತ್ಯ ಒಮ್ಮೆಯಾದರೂ ತಮ್ಮ ಬೀಟ್​ಗೆ ಭೇಟಿ ಕೊಡಬೇಕು. ಹೊಸದಾಗಿ ಬಾಡಿಗೆ ಬರುವವರ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಕ್ರಿಮಿನಲ್​ಗಳು, ಭಯೋತ್ಪಾದಕರು ಬಾಡಿಗೆಗೆ ಬಂದು ಸೇರಿಕೊಳ್ಳುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ, ಎಚ್ಚರಿಕೆಯಿಂದ ಇರಬೇಕು. ಸಿಬ್ಬಂದಿ ಕುಂದುಕೊರತೆ ಕೇಳಬೇಕು ಎಂದು ಪೊಲೀಸ್ ಆಯುಕ್ತರಿಗೆ ಸೂಚಿಸಿದರು. ಎಲ್ಲ ಠಾಣೆಗೆ ಪ್ರತಿ 15 ದಿನಕ್ಕೊಮ್ಮೆ ಭೇಟಿ ನೀಡಿ ಪರಿಶೀಲಿಸುವಂತೆ ಎಸಿಪಿ ಎನ್.ಬಿ. ಸಕ್ರಿ ಅವರಿಗೆ ಆದೇಶಿಸಿದರು.

ವಾರದ ರಜೆ ಕಡ್ಡಾಯ: ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಅದಕ್ಕಾಗಿ ಎಲ್ಲೆಡೆ ಸೈಬರ್ ಠಾಣೆಗಳನ್ನು ತೆರೆಯಲಾಗುತ್ತಿದೆ. ಬೆಂಗಳೂರಿನಲ್ಲಿ ಸೈಬರ್ ಸಿಬ್ಬಂದಿ ತರಬೇತಿ ಕೇಂದ್ರ ತೆರೆಯಲಾಗಿದೆ. ಎಲ್ಲ ಸಿಬ್ಬಂದಿಗೆ ಕಡ್ಡಾಯವಾಗಿ ವಾರದ ರಜೆ ಕೊಡಲು ಸೂಚಿಸಲಾಗಿದೆ. ಕೆಲವರು ರಜೆ ಬೇಡ ಎಂದು ಹೇಳುತ್ತಿದ್ದಾರೆ. ನೈಟ್ ಬೀಟ್ ಹೆಚ್ಚಿಸಲು ಸೂಚಿಸಿದ್ದೇನೆ ಎಂದು ಪರಮೇಶ್ವರ್ ಹೇಳಿದರು.

ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ, ಎಸಿಪಿಗಳಾದ ಎನ್.ಬಿ. ಸಕ್ರಿ, ಎಚ್.ಕೆ ಪಠಾಣ ಮತ್ತಿತರರು ಇದ್ದರು.