ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಅವಿವೇಕಿತನದ ಹೇಳಿಕೆ ನೀಡುವುದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಶೋಭೆ ತರುವುದಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾಯಿ ಬೊಗಳಿದರೆ ಅದನ್ನು ಕಚ್ಚಲು ಆಗುವುದಿಲ್ಲ. ಯಾರ‌್ಯಾರೋ ಬೊಗಳಿದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಜವಾಬ್ದಾರಿ ಸ್ಥಾನದಲ್ಲಿರುವವರು ಮಾತನಾಡಿದರೆ ನಾವು ಅದರ ಬಗ್ಗೆ ಯೋಚನೆ ಮಾಡುತ್ತೇವೆ. ಆದರೆ ಕೆಲಸಕ್ಕೆ ಬಾರದವರು ಮಾತನಾಡಿದರೆ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಶಿವಸೇನೆ ಅಲ್ಲ ಯಾರೇ ಬಂದರೂ ಬೆಳಗಾವಿ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದರು.
ಗಡಿ ವಿವಾದ ಈಗ ಮುಗಿದ ಅಧ್ಯಾಯ. ಆ ಕುರಿತು ವಿನಾಕಾರಣ ಹೇಳಿಕೆ ನೀಡುವುದು ಸೂಕ್ತವಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ಪರ ತೀರ್ಪು ಪ್ರಕಟವಾಗುವ ವಿಶ್ವಾಸವಿದೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಮ್ಮ ಸಹೋದರ ಎರಡು ವರ್ಷಗಳ ಹಿಂದೆ ಏನು ಹೇಳಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ರಾಜ್ಯದಲ್ಲಿ ಗಡಿ ಪ್ರಾಧಿಕಾರದ ಅಧ್ಯಕ್ಷರನ್ನು ನೇಮಿಸುವ ಪ್ರಕ್ರಿಯೆ ಜಾರಿಯಲ್ಲಿದೆ.
ಈ ಸಂಬಂಧ ಮುಖ್ಯಮಂತ್ರಿಗಳು ಶೀಘ್ರ ತೀರ್ಮಾನ ಕೈಗೊಳ್ಳಲಿದ್ದಾರೆ. ರಾಜ್ಯದಲ್ಲಿ ಓರ್ವ ಸಚಿವರನ್ನು ಗಡಿ ವಿಷಯದ ಉಸ್ತುವಾರಿ ನೋಡಿಕೊಳ್ಳಲು ನೇಮಿಸಲಾಗುವುದು ಎಂದರು.