More

    ಡಿಸಿಸಿ ಬ್ಯಾಂಕ್‌ನಿಂದ ಪ್ರವಾಸಿ ಟ್ಯಾಕ್ಸಿಗಳ ಖರೀದಿಗೆ ಸಾಲ

    ಕೋಲಾರ: ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆದ ಸ್ವಾಭಿಮಾನಿಗಳು ಎಂದಿಗೂ ಬ್ಯಾಂಕಿಗೆ ಮೋಸ ಮಾಡಲಾರರು ಎಂಬ ಭರವಸೆ ಇದೆ ಎಂದು ಕೆಜಿಎಫ್ ಶಾಸಕಿ ರೂಪಕಲಾ ಹೇಳಿದರು.

    ನಗರದ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಶುಕ್ರವಾರ ಪ್ರವಾಸೋದ್ಯಮ ಇಲಾಖೆಯಿಂದ ಆಯ್ಕೆಯಾಗಿರುವ ಪ್ರವಾಸಿ ಟ್ಯಾಕ್ಸಿ ಫಲಾನುಭವಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
    ನಷ್ಟದಲ್ಲಿದ್ದ ಬ್ಯಾಂಕಿಗೆ ಪುನಶ್ಚೇತನ ನೀಡುವ ಮೂಲಕ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಸ್ತ್ರೀಶಕ್ತಿ ಸಂಘಗಳಿಗೆ, ರೈತರಿಗೆ ಹಾಗೂ ಬೀದಿಬದಿ ವ್ಯಾಪಾರಿಗಳ ಬದುಕಿಗೆ ನವ ಚೈತನ್ಯ ಮೂಡಿಸಿದ್ದಾರೆ. ಇದೀಗ 125 ಫಲಾನುಭವಿಗಳಿಗೆ ಪ್ರವಾಸಿ ಟ್ಯಾಕ್ಸಿ ಖರೀದಿಸಲು ಸಾಲ ನೀಡಲು ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ಉದ್ಯೋಗಿಕರಣಕ್ಕೆ ಒತ್ತು ನೀಡಿದ್ದಾರೆ ಎಂದು ಪ್ರಶಂಸಿಸಿದರು.

    ನಿರುದ್ಯೋಗಿಗಳು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆಯುವುದು ಸುಲಭವಲ್ಲ. ಆದರೆ ಡಿಸಿಸಿ ಬ್ಯಾಂಕ್ ಎಂದಿಗೂ ಬಡವರ ಪರವಾಗಿದೆ. ಪ್ರವಾಸಿ ಟ್ಯಾಕ್ಸಿಗಳಿಗೆ ಉತ್ತಮ ಬೇಡಿಕೆ ಇದೆ ಎಂಬ ಕಾರಣಕ್ಕೆ ಪ್ರವಾಸೋದ್ಯಮ ಇಲಾಖೆ ಸಹಕಾರದಿಂದ ಟ್ಯಾಕ್ಸಿಗಳ ಖರೀದಿಗೆ ಸಾಲ ನೀಡಲು ಕ್ರಾಂತಿಕಾರಿ ಹೆಜ್ಜೆಯನ್ನಿಡಲಾಗಿದ್ದು, ಫಲಾನುಭವಿಗಳು ಟ್ಯಾಕ್ಸಿ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳುವ ಜತೆಗೆ ಸಕಾಲಕ್ಕೆ ಸಾಲ ಮರು ಪಾವತಿ ಮಾಡಿ ನಂಬಿಕೆ ಉಳಿಸಿಕೊಳ್ಳಬೇಕು ಎಂದರು.
    ಬಡವರ ಪಾಲಿಗೆ ಗೋವಿಂದಗೌಡ ಹೃದಯವಂತರು, ಒಂದು ವೇಳೆ ಯಾರಾದರೂ ಸಕಾಲಕ್ಕೆ ಸಾಲ ಮರು ಪಾವತಿಸದಿದ್ದರೆ ರೌದ್ರಾವತಾರ ತಾಳುವುದುಂಟು ಎಂದು ವಿಶ್ಲೇಷಿಸಿದರು.

    ಡಿಸಿಸಿ ಬ್ಯಾಂಕಿನಿಂದ ಈವರೆಗೆ ಸಾವಿರಾರು ಸಂಘಗಳು ಆರ್ಥಿಕ ನೆರವು ಪಡೆದು ಸ್ವಾವಲಂಬನೆ ಸಾಧಿಸಿವೆ. ಅದೇ ರೀತಿ ಪ್ರವಾಸಿ ಟ್ಯಾಕ್ಸಿಗಳಿಗೆ ಸಾಲ ಪಡೆಯುವ ನಿರುದ್ಯೋಗಿಗಳು ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು.
    ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಸೌಮ್ಯಾಗೌಡ ಮಾತನಾಡಿ, ತಾಂತ್ರಿಕ ಕಾರಣಗಳಿಂದಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಶೇ.30 ಫಲಾನುಭವಿಗಳಿಗೆ ಮಾತ್ರವೇ ಸಾಲ ಒದಗಿಸಿದ್ದು, ಉಳಿದವರಿಗೆ ಕಳೆದ 8 ವರ್ಷಗಳಿಂದಲೂ ನ್ಯಾಯ ಒದಗಿಸಲು ಸಾಧ್ಯವಾಗಿರಲಿಲ್ಲ. ಡಿಸಿಸಿ ಬ್ಯಾಂಕ್ ಜತೆ ಒಪ್ಪಂದ ಮಾಡಿಕೊಂಡು 125 ಅರ್ಜಿದಾರರಿಗೂ ಸಾಲ ಕೊಡಲಾಗುತ್ತಿದೆ ಎಂದರು.

    ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ, ಎಂ.ಎಲ್.ಅನಿಲ್ ಕುಮಾರ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಡಿಸಿಸಿ ಬ್ಯಾಂಕ್ ಸಿಇಒ ಎಂ.ರವಿ, ಸಹಕಾರಿ ಯೂನಿಯನ್ ನಿರ್ದೇಶಕರಾದ ಎಸ್.ಸುರೇಶ್, ಎಸ್.ಆರ್.ರುದ್ರಸ್ವಾಮಿ, ಜಿ.ಅಶ್ವತ್ಥನಾರಾಯಣ, ಸಿಇಒ ಕೆ.ಎಂ.ಭಾರತಿ ಉಪಸ್ಥಿತರಿದ್ದರು.

    ಕೈಗೆಟುಕುವ ಬೆಲೆಗೆ ಟ್ಯಾಕ್ಸಿ: ಫಲಾನುಭವಿಗಳಿಗೆ ಟೊಯೋಟಾ ಮತ್ತು ಮಾರುತಿ ಸುಜುಕಿ ಕಂಪನಿ ಜತೆಗೆ ಚರ್ಚಿಸಿ ರಿಯಾಯಿತಿ ದರದಲ್ಲಿ ಟ್ಯಾಕ್ಸಿಗಳನ್ನು ಒದಗಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಟ್ಯಾಕ್ಸಿಯನ್ನು ಸಬ್‌ಲೀಸ್‌ಗೆ ಕೊಡುವಂತಿಲ್ಲ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts