More

    ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ಪಕ್ಷಾತೀತವಾಗಿ ಸಾಲ ವಿತರಣೆ

    ಮುಳಬಾಗಿಲು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತಿರುವುದರಿಂದ ಕುಟುಂಬಗಳು ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿರುವುದರಿಂದ ಬ್ಯಾಂಕ್ ಸಹ ಲಾಭದಾಯಕವಾಗಿ ಹೊರಹೊಮ್ಮಿದೆ. ಇದರ ಶ್ರೇಯಸ್ಸು ಜಿಲ್ಲೆಯ ಮಾತೆಯರಿಗೆ ಸಲ್ಲುತ್ತದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

    ಉತ್ತನೂರು ಗ್ರಾಪಂ ಕಾರ್ಯಾಲಯದ ಮುಂಭಾಗದ ಉತ್ತನೂರು ವಿಎಸ್‌ಎಸ್‌ಎನ್‌ನಿಂದ 1,030 ಮಹಿಳೆಯರಿಗೆ 5.5 ಕೋಟಿ ರೂ. ಸಾಲ ವಿತರಣೆ ಮಾಡಿ ಮಾತನಾಡಿ, ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. ಇದಕ್ಕೆ ಆಡಳಿತ ಮಂಡಳಿ ಹಾಗೂ ವಿಎಸ್‌ಎಸ್‌ಎನ್‌ಗಳ ಜನಪರ ಆಡಳಿತವೇ ಕಾರಣ. ಬ್ಯಾಂಕ್‌ನಿಂದ ಪಕ್ಷಾತೀತವಾಗಿ ಸಾಲ ವಿತರಣೆ ಮಾಡಲಾಗುತ್ತಿದೆ. ಕೆಲವರು ಟೀಕೆ, ಆರೋಪ ಮಾಡುತ್ತಿದ್ದರೂ ಹೆಣ್ಣು ಮಕ್ಕಳಿಗೆ ಸಾಲ ನೀಡುವ ಮೂಲಕ ಕುಟುಂಬಗಳನ್ನು ಅಧಿಕ ಬಡ್ಡಿ ದಂಧೆಕೋರರ ಕೈಗೆ ಸಿಗದಂತೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.

    ನಬಾರ್ಡ್ ಬ್ಯಾಂಕ್ ಸಿಜೆಎಂ ಸೂರ್ಯಪ್ರಕಾಶ್ ಮಾತನಾಡಿ, ಮಹಿಳಾ ಸ್ವಸಹಾಯ ಸಂಘಗಳನ್ನು ಆರಂಭಿಸಿದ್ದೇ ಕರ್ನಾಟಕದಲ್ಲಿ. ಆದರೆ ಆಂಧ್ರಪ್ರದೇಶ ಅನುಷ್ಠಾನದಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಕಾಯ್ದುಕೊಂಡಿದೆ. ರಾಜ್ಯದಲ್ಲಿ ಕೋಲಾರ ಮಹಿಳಾ ಸ್ವಸಹಾಯ ಸಂಘಗಳ ಕಾರ್ಯಚಟುವಟಿಕೆಗಳು ಉತ್ತಮಗೊಳ್ಳಲು ಡಿಸಿಸಿ ಬ್ಯಾಂಕ್ ಆರ್ಥಿಕ ಸಾಕ್ಷರತೆ ಪ್ರಮುಖ ಕಾರಣವಾಗಿದೆ. ಬ್ಯಾಂಕ್ ಸಾಲ ನೀಡುವುದನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸುವುದರ ಜತೆಗೆ ಮರುಪಾವತಿ ಮಾಡಿ ಮತ್ತಷ್ಟು ಜನರಿಗೆ ಸಾಲ ಸಿಗುವಂತೆ ನೋಡಿಕೊಳ್ಳಬೇಕು ಎಂದರು.

    ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಎಂ.ಸಿ.ನೀಲಕಂಠೇಗೌಡ ಮಾತನಾಡಿ, ಐದು ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ನಷ್ಟದ ಹಾದಿಯಲ್ಲಿದ್ದು, ಎರಡು ಜಿಲ್ಲೆಗಳ ಹಲವಾರು ವಿಎಸ್‌ಎಸ್‌ಎನ್‌ಗಳು ಬಾಗಿಲು ಮುಚ್ಚುವ ಸ್ಥಿತಿ ತಲುಪಿದ್ದವು. ಇವುಗಳಿಗೆ ಪುನಶ್ಚೇತನ ಸಿಕ್ಕಿದೆ. ಆಡಳಿತ ಮಂಡಳಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಿ ಗ್ರಾಮೀಣ ಅಭಿವೃದ್ಧಿ ಜತೆಗೆ ಸಹಕಾರಿ ಕ್ಷೇತ್ರವನ್ನು ಬಲಪಡಿಸಲು ದಿಟ್ಟ ನಿರ್ಧಾರ ಮಾಡಿರುವುದರಿಂದ ಇಂದು ಕುಟುಂಬಗಳು ಆರ್ಥಿಕ ಸಾಕ್ಷರತೆ ಸಾಧಿಸುವತ್ತ ದಾಪುಗಾಲು ಹಾಕಿವೆ ಎಂದರು.

    ಉತ್ತನೂರು ವಿಎಸ್‌ಎಸ್‌ಎಸ್‌ಎನ್ ಅಧ್ಯಕ್ಷ ಗುಜ್ಜನಹಳ್ಳಿ ಮಂಜುನಾಥ್, ಉಪಾಧ್ಯಕ್ಷ ವಿ.ನಂದೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಸುಬ್ರಮಣಿ, ಗುಮಾಸ್ತ ಶಿವಕುಮಾರ್, ಜಿಪಂ ಸದಸ್ಯ ವಿ.ಎಸ್.ಅರವಿಂದ್‌ಕುಮಾರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಉತ್ತನೂರು ಶ್ರೀನಿವಾಸ್, ಗ್ರಾಪಂ ಸದಸ್ಯ ಚೌಡಪ್ಪ, ಮುಖಂಡರಾದ ರಾಜಣ್ಣ, ಮುಡಿಯನೂರು ಮುನಿಯಪ್ಪ, ಎಂ.ನಾರಾಯಣಸ್ವಾಮಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts