ಕೋಲಾರ: ಡಿಸಿಸಿ ಬ್ಯಾಂಕಿನ ಸಾಧನೆಗೆ ಸಹಕಾರ ನೀಡುತ್ತಿರುವ ನಬಾರ್ಡ್ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಹಕರಿಗೆ ಮೈಕ್ರೋ ಎಟಿಎಂ ಸೌಲಭ್ಯ ಕಲ್ಪಿಸಲು ಮುಂದಾಗಿದೆ ಎಂದು ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ನಗರದ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಡಿಸಿಸಿ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲೇ ಮೊದಲ ಬಾರಿಗೆ ನಬಾರ್ಡ್ ಡಿಸಿಸಿ ಬ್ಯಾಂಕ್ ವ್ಯಾಪ್ತಿಯ ಎಲ್ಲ ಸೊಸೈಟಿಗಳಿಗೆ ಮೈಕ್ರೋ ಎಟಿಎಂ ವ್ಯವಸ್ಥೆ ಕಲ್ಪಿಸುತ್ತಿದ್ದು, ಗ್ರಾಹಕರಿಗೆ ಮನೆ ಬಾಗಿಲಲ್ಲೇ ಬ್ಯಾಂಕಿಂಗ್ ಸೇವೆ ಸಿಗಲಿದೆ ಎಂದರು.
ನೂತನ ಯೋಜನೆಗೆ ನಬಾರ್ಡ್ ಶೇ.90 ಧನಸಹಾಯ ನೀಡಲಿದೆ, ಮೈಕ್ರೋ ಎಟಿಎಂಗಳನ್ನು ಹಳ್ಳಿಗೆ ತೆಗೆದುಕೊಂಡು ಹೋಗಿ ಹಣ ಡ್ರಾ ಮಾಡಿಕೊಳ್ಳಲು ಹಾಗೂ ಉಳಿತಾಯ ಖಾತೆಗೆ ಹಣ ಕಟ್ಟಿಸಿಕೊಳ್ಳುವುದರ ಜತೆಗೆ ಸಾಲ ವಸೂಲಾತಿಗೆ ಸಂಬಂಧಿಸಿದ ರಸೀದಿ ಸ್ಥಳದಲ್ಲೇ ನೀಡುವ ಮೂಲಕ ಗ್ರಾಹಕರಲ್ಲಿ ನಂಬಿಕೆ ಮೂಡಿಸಲಾಗುವುದು ಎಂದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ತಲಾ ಒಂದು ಮೊಬೈಲ್ ಎಟಿಎಂ ಮಂಜೂರಾಗಿದ್ದು, ಪ್ರತಿದಿನ ಗ್ರಾಹಕರಿಗೆ ಸೇವೆ ಒದಗಿಸಲಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕ್ ಅಧ್ಯಕ್ಷರಿಂದ ಅಟೆಂಡರ್‌ವರೆಗೆ ಠೇವಣಿ ಸಂಗ್ರಹಕ್ಕೆ ಗುರಿ ನಿಗದಿ ಮಾಡಲಾಗಿದ್ದು, ಮಾರ್ಚ್ ಅಂತ್ಯಕ್ಕೆ ಕನಿಷ್ಠ 125 ಕೋಟಿ ರೂ. ಗುರಿ ಸಾಧಿಸಲೇಬೇಕು ಎಂದು ಸೂಚಿಸಿದರು.
ಸಾಲಮನ್ನಾದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಸರ್ಕಾರ 21 ಡಿಸಿಸಿ ಬ್ಯಾಂಕ್‌ಗಳಲ್ಲಿ ತನಿಖೆ ನಡೆಸುತ್ತಿದೆಯಾದರೂ ನಮ್ಮ ಬ್ಯಾಂಕಿನ ಬಗ್ಗೆ ಯಾವುದೇ ದೂರು ಇಲ್ಲದಿರುವುದರಿಂದ ಮೆಚ್ಚುಗೆ ವ್ಯಕ್ತಪಡಿಸಿದೆ.
ಶೇ.3.92ರಷ್ಟು ಎನ್‌ಪಿಎ ಆಗಿದ್ದು ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಸೂಲಿ ಮಾಡಬೇಕಾಗಿದೆ. ಬ್ಯಾಂಕ್ ಹಾಗೂ ಸೊಸೈಟಿ ನಡುವೆ ಇರುವ ಸುಮಾರು 15 ಕೋಟಿ ರೂ. ಅಂತರ ಕಡಿಮೆ ಮಾಡಲೇಬೇಕಾಗಿದ್ದು, ಇದಕ್ಕಾಗಿ ಕೆಸಿಸಿ ಲಾಭಾಂಶ ಬಳಕೆ ಮಾಡಿಕೊಳ್ಳಲಾಗುತ್ತಿದೆ, ಮುಂದಿನ 4 ವರ್ಷದಲ್ಲಿ ಈ ಅಂತರ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ಎ.ನಾಗರಾಜ, ನಿರ್ದೇಶಕರಾದ ಎಂ.ಎಲ್.ಅನಿಲ್ ಕುಮಾರ್,ಅಶ್ವತ್ಥಪ್ಪ, ಎನ್.ನಾಗಿರೆಡ್ಡಿ, ಹನುಮಂತರೆಡ್ಡಿ,ಎನ್.ಸೋಮಶೇಖರ್,ಆರ್.ನಾರಾಯಣರೆಡ್ಡಿ, ಎಚ್.ಎಸ್.ಮೋಹನ್ ರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ಎಂ.ರವಿ, ಎಜಿಎಂಗಳಾದ ಎಂ.ಆರ್.ಶಿವಕುಮಾರ್, ಎನ್.ಬೈರೇಗೌಡ, ಖಲೀಂವುಲ್ಲಾ ಇದ್ದರು.
103 ಕೋಟಿ ಕಟ್ಟಿದ್ರೆ ಚುನಾವಣೆಯಲ್ಲಿ ಸ್ಪರ್ಧೆ: ಅಪೆಕ್ಸ್ ಬ್ಯಾಂಕ್‌ಗೆ 103 ಕೋಟಿ ರೂ. ಸಾಲ ಕಟ್ಟದೇ ಹೋದಲ್ಲಿ ಅದರ ಚುನಾವಣೆಯಲ್ಲಿ ಕೋಲಾರ ಡಿಸಿಸಿ ಬ್ಯಾಂಕ್ ಸ್ಪರ್ಧೆ ಮಾಡಲು ಸಾಧ್ಯವಿಲ್ಲ, ಹಾಗಾಗಿ ಸಿಬ್ಬಂದಿ ಸಾಲ ವಸೂಲಾತಿ ಹಾಗೂ ಠೇವಣಿ ಸಂಗ್ರಹಕ್ಕೆ ಒತ್ತು ನೀಡಬೇಕು. ಶೀಘ್ರದಲ್ಲೇ ಅಪೆಕ್ಸ್ ಬ್ಯಾಂಕ್ ಚುನಾವಣೆ ನಡೆಯಲಿದ್ದು, ಸಾಲ ಕಟ್ಟಿದರೆ ಮಾತ್ರ ಪ್ರತಿನಿಧಿ ಆಯ್ಕೆ ಮಾಡಿ ಕಳುಹಿಸಲು ಸಾಧ್ಯ ಆಗುತ್ತದೆ ಎಂದು ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.