More

    9 ರಿಂದ ಮನೆಬಾಗಿಲಿಗೆ ಎಟಿಎಂ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾಹಿತಿ

    ಕೋಲಾರ: ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್ ಸೇವೆ ಒದಗಿಸುವ ಉದ್ದೇಶದಿಂದ ಜು.9ರಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೈಕ್ರೋ ಎಟಿಎಂ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

    ಚಲುವನಹಳ್ಳಿಯಲ್ಲಿ ಶನಿವಾರ ಬ್ಯಾಂಕ್ ಮತ್ತು ನರಸಾಪುರ ರೇಷ್ಮೆ ಬೆಳೆಗಾರರ ಸೇವಾ ಸಹಕಾರ ಸಂಘ ಹಮ್ಮಿಕೊಂಡಿದ್ದ ಸಾಲ ವಿತರಣಾ ಕಾರ್ಯಕ್ರಮದಲ್ಲಿ 2.25 ಕೋಟಿ ಸಾಲ ವಿತರಿಸಿ ಮಾತನಾಡಿ, ಇನ್ನು ಮುಂದೆ ಗ್ರಾಹಕರು ಸಾಲ ಪಡೆಯಲು ಮತ್ತು ಉಳಿತಾಯದ ಹಣ ಠೇವಣಿ ಮಾಡಲು ಬ್ಯಾಂಕಿಗೆ ಬರುವ ಅವಶ್ಯಕತೆ ಇರುವುದಿಲ್ಲ, ನಮ್ಮ ಸಿಬ್ಬಂದಿಯೇ ನಿಮ್ಮ ಬಳಿ ಬಂದು ಸೇವೆ ಒದಗಿಸಲಿದ್ದಾರೆ ಎಂದರು.

    ಎರಡೂ ಜಿಲ್ಲೆಯ 200 ಸೊಸೈಟಿಗಳಿಗೆ ಮೈಕ್ರೋ ಎಟಿಎಂ ಯಂತ್ರ ನೀಡಲಾಗಿದೆ, ಇದರಿಂದ ಗ್ರಾಹಕರು ಬ್ಯಾಂಕಿಗೆ ಅಲೆಯುವುದು ತಪ್ಪುತ್ತದೆ ಎಂದರು.

    ಬ್ಯಾಂಕ್ ಮೂಲಕ ಎರಡೂ ಜಿಲ್ಲೆಯ ರೈತರು ಮತ್ತು ಮಹಿಳೆಯರಿಗೆ ಕೋಟ್ಯಂತರ ರೂ. ಸಾಲ ನೀಡಲಾಗಿದೆ. ಬಿತ್ತನೆ ಕಾಲ ಆರಂಭದಿಂದಾಗಿ ಸಾಲಕ್ಕಾಗಿ ಬೇಡಿಕೆ ಹೆಚ್ಚಾಗಿದೆ, ರೈತರಿಗೆ 100 ಕೋಟಿ ರೂ. ಮಹಿಳೆಯರಿಗೆ 100 ಕೋಟಿ ರೂ. ತುರ್ತಾಗಿ ಒದಗಿಸಬೇಕಿದೆ. ಕರೊನಾದಿಂದ ಬ್ಯಾಂಕಿನ ಆರ್ಥಿಕತೆ ಮೇಲೆ ಪರಿಣಾಮ ಬೀರಿದ್ದರೂ ಸಾಲ ನೀಡಲು ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದರು.

    ಬ್ಯಾಂಕಿನಲ್ಲಿ ಶ್ರೀಮಂತರ‌್ಯಾರೂ ಠೇವಣಿ ಇಡುತ್ತಿಲ್ಲ, ಮಹಿಳೆಯರು ಬ್ಯಾಂಕಿಗೆ ಶಕ್ತಿ ತುಂಬುತ್ತಿದ್ದಾರೆ. ಪ್ರಸ್ತುತ 330 ಕೋಟಿ ರೂ. ಠೇವಣಿ ಇದೆ. ಜನರ ಬೇಡಿಕೆಗೆ ತಕ್ಕಂತೆ ಸಾಲ ನೀಡಲು ಕಷ್ಟವಾಗುತ್ತಿದ್ದರೂ ಆಡಳಿತ ಮಂಡಳಿ ಮಹಿಳೆಯರಿಗೆ ಸಾಲ ನೀಡುವುದನ್ನು ನಿಲ್ಲಿಸಿಲ್ಲ ಎಂದರು.

    ಬ್ಯಾಂಕ್ ವ್ಯಾಪ್ತಿಯ ಸೊಸೈಟಿಗಳಲ್ಲಿ ಸೋಮವಾರದಿಂದ ಗಣಕೀಕರಣ ವ್ಯವಸ್ಥೆ ಚಾಲನೆಗೆ ಬರುವುದರಿಂದ ಹಣ ದುರುಪಯೋಗಕ್ಕೆ ಅವಕಾಶವಾಗುವುದಿಲ್ಲ, ಪ್ರತಿ ಗ್ರಾಹಕರ ಲೆಕ್ಕವನ್ನು ಪಾರದರ್ಶಕವಾಗಿ ನಿರ್ವಹಣೆ ಮಾಡಲಾಗುತ್ತದೆ ಎಂದರು.

    ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಮಾದರಿಯಾಗಿದೆ ಎಂದರು.

    ನಿರ್ದೇಶಕರಾದ ದಯಾನಂದ್, ಸೊಣ್ಣೇಗೌಡ, ಕೋಲಾರ ಎಪಿಎಂಸಿ ಮಾಜಿ ಅಧ್ಯಕ್ಷೆ ರಾಜೇಶ್ವರಿ, ನರಸಾಪುರ ಹೋಬಳಿ ರೇಷ್ಮೆ ಬೆಳೆಗಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ವಾಸು, ಸದಸ್ಯರಾದ ರತ್ಮಮ್ಮ, ಚಂಜಿಮಲೆ ರಮೇಶ್, ಸುರೇಶ್ ಉಪಸ್ಥಿತರಿದ್ದರು.

    ಮಹಿಳಾ ಸ್ವಸಹಾಯ ಸಂಘಗಳಿಗೆ ಈಗ 50 ಸಾವಿರ ರೂ. ಸಾಲ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ಸಂಘಕ್ಕೆ 1 ಲಕ್ಷ ರೂ. ಸಾಲ ನೀಡುವ ಗುರಿ ಇದೆ. ಮಹಿಳೆಯರು ಸಕಾಲಕ್ಕೆ ಸಾಲದ ಕಂತು ಪಾವತಿಸಬೇಕು, ಬಡ್ಡಿಯನ್ನು ನಿಮ್ಮ ಪರವಾಗಿ ಸರ್ಕಾರ ಡಿಸಿಸಿ ಬ್ಯಾಂಕಿಗೆ ತುಂಬುತ್ತದೆ, ಉಳಿತಾಯಕ್ಕಾಗಿ ಸಾಲ ಮಾಡುವ ಅವಶ್ಯಕತೆ ಇಲ್ಲ, ಸಾಲದ ಹಣ ಉಳಿತಾಯ ಮಾಡಿ ಬ್ಯಾಂಕಿನಲ್ಲಿ ಠೇವಣಿ ಇಟ್ಟಲ್ಲಿ ಪ್ರಯೋಜನವಾಗುತ್ತದೆ.
    ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts