More

    ಮುಳುಗುವ ಹಂತದಲ್ಲಿದ್ದ ಡಿಸಿಸಿ ಬ್ಯಾಂಕನ್ನು ಜೀವಂತವಾಗಿರಿಸಿರುವುದೇ ಮಹಿಳೆಯರು

    ಮುಳಬಾಗಿಲು: ಮುಳುಗುವ ಹಂತದಲ್ಲಿದ್ದ ಡಿಸಿಸಿ ಬ್ಯಾಂಕನ್ನು ಜೀವಂತವಾಗಿರಿಸಿರುವುದೇ ಮಹಿಳೆಯರು. ಮುಳಬಾಗಿಲು ಶಾಖೆಯಲ್ಲಿ 16 ಕೋಟಿ ರೂ. ಠೇವಣಿ ಇಟ್ಟಿದ್ದಾರೆ. ಇದೇ ರೀತಿ ಇನ್ನೂ ಹೆಚ್ಚಿನ ರೈತರು ಠೇವಣಿ ಇಡಲು ಮುಂದೆ ಬರಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.

    ನಗರದ ಎಪಿಎಂಸಿ ಪ್ರಾಂಗಣದಲ್ಲಿರುವ ಕೋಚಿಮುಲ್ ಸಭಾಂಗಣದಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಗುರುವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಿಸಾನ್ ಶ್ರೀಲಕ್ಷ್ಮೀ ಠೇವಣಿ ಬಾಂಡ್ ಯೋಜನೆ ಅನುಷ್ಠಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    330 ಕೋಟಿ ರೂ. ಕೃಷಿ ಸಾಲವನ್ನು ಈ ಸಾಲಿನಲ್ಲಿ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಇದನ್ನು ಪ್ರತಿ ರೈತರಿಗೆ ವಿತರಿಸಲು ವಿಎಸ್‌ಎಸ್‌ಎನ್ ಕಾರ್ಯದರ್ಶಿಗಳು, ಅಧ್ಯಕ್ಷರು, ಆಡಳಿತ ಮಂಡಳಿ, ನಿರ್ದೇಶಕರು ಗ್ರಾಮಗಳಲ್ಲಿ ರೈತರಿಗೆ ಜಾಗೃತಿ ಮೂಡಿಸಿ ಹಣವನ್ನು ಸಹಕಾರಿ ಬ್ಯಾಂಕ್‌ನಲ್ಲಿ ಠೇವಣಿ ಮಾಡುವಂತೆ ಪ್ರೇರೇಪಿಸಬೇಕು. ಈ ಹಣಕ್ಕೆ ಇತರ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿ ನೀಡಲಾಗುವುದು ಎಂದರು.

    ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಎಂ.ಸಿ.ನೀಲಕಂಠೇಗೌಡ ಮಾತನಾಡಿ, ಮುಳಬಾಗಿಲು ತಾಲೂಕಿನಲ್ಲಿ ಡಿಸಿಸಿ ಬ್ಯಾಂಕ್‌ನಿಂದ 275 ಕೋಟಿ ರೂ. ಸಾಲ ನೀಡಲಾಗಿದೆ ಎಂದರು.

    ಪಿಸಿಎಂಎಸ್ ಅಧ್ಯಕ್ಷ ಆಲಂಗೂರು ಶಿವಣ್ಣ ಮಾತನಾಡಿ, ಸಹಕಾರಿ ಕ್ಷೇತ್ರ ರಾಜಕೀಯ ರಹಿತವಾಗಿ ಬೆಳೆಯಬೇಕು. ರೈತರು ಮತ್ತು ಮಹಿಳೆಯರ ಅಭಿವೃದ್ಧಿಗೆ ಸಹಕಾರಿ ಬ್ಯಾಂಕ್‌ಗಳ ಸೇವೆ ಮುಂದುವರಿಯಬೇಕು. ಶೇ.80 ಜನ ಈ ವಲಯಗಳಲ್ಲಿ ಆರ್ಥಿಕ ಭದ್ರತೆ ಇಲ್ಲದೆ ಜೀವನ ಸಾಗಿಸುತ್ತಿದ್ದಾರೆ. ಈ ಸಮುದಾಯಕ್ಕೆ ಸಹಕಾರಿ ಕ್ಷೇತ್ರವೇ ಭದ್ರ ಬುನಾದಿ ಎಂದರು.

    ಬ್ಯಾಂಕ್ ವ್ಯವಸ್ಥಾಪಕ ಚೆಲುವರಾಜ್, ಎಪಿಎಂಸಿ ಅಧ್ಯಕ್ಷ ವಿಶ್ವನಾಥ್‌ಗೌಡ, ಉಪಾಧ್ಯಕ್ಷ ವೆಂಕಟರವಣಪ್ಪ, ಮಾಜಿ ಅಧ್ಯಕ್ಷ ವಿವೇಕಾನಂದಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಎಂ.ಶ್ರೀನಿವಾಸ್, ಕೆ.ಎಂ.ವೆಂಕಟರಾಮರೆಡ್ಡಿ, ವಿಎಸ್‌ಎಸ್‌ಎನ್ ಅಧ್ಯಕ್ಷರಾದ ಗುಜ್ಜನಹಳ್ಳಿ ಮಂಜುನಾಥ್, ಹನುಮನಹಳ್ಳಿ ಎಂ.ನಂಜುಂಡಪ್ಪ, ಎನ್.ವಡ್ಡಹಳ್ಳಿ ಪೆದ್ದರೆಡ್ಡಿ, ಬಲ್ಲ ರಾಮಕೃಷ್ಣಪ್ಪ, ಎಮ್ಮೇನತ್ತ ನಾಗರಾಜರೆಡ್ಡಿ, ಗುಮ್ಲಾಪುರ ಅಮರನಾರಾಯಣ್ ಇದ್ದರು.

    ಗ್ರಾಹಕರ ಠೇವಣಿಗೆ ವಿಮೆ: ವಿಶ್ವ ಮಹಿಳಾ ದಿನಾಚಾರಣೆ ಪ್ರಯುಕ್ತ ಡಿಸಿಸಿ ಬ್ಯಾಂಕ್ ಕಿಸಾನ್ ಶ್ರೀಲಕ್ಷ್ಮೀ ಠೇವಣಿ ಬಾಂಡ್ ಯೋಜನೆ ಜಾರಿಗೊಳಿಸಿದ್ದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಸಾರ್ವಜನಿಕರು ಠೇವಣಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ವೈಯಕ್ತಿಕ ಅಥವಾ ಇಬ್ಬರಿಗಿಂತ ಹೆಚ್ಚಿನ ಜಂಟಿ ಖಾತೆಯಲ್ಲಿ ಅಪ್ರಾಪ್ತ ವಯಸ್ಕರ ಮತ್ತು ಬಾಲಕರ ಜಂಟಿಯಲ್ಲಿ ಠೇವಣಿ ಮಾಡಬಹುದು. ಒಬ್ಬರು ಕನಿಷ್ಠ 5 ಸಾವಿರದಿಂದ 25 ಸಾವಿರ ರೂ.ವರೆಗೆ ಎಷ್ಟು ಬಾಂಡ್‌ಗಳನ್ನಾದರೂ ಪಡೆಯಬಹುದು. ಆರು ತಿಂಗಳೊಳಗೆ 7.25 ಬಡ್ಡಿಯಂತೆ 5ರಿಂದ 10 ಸಾವಿರ ಮೊತ್ತಕ್ಕೆ ಪಡೆಯಬಹುದು. ಒಂದಕ್ಕಿಂದ ಮೇಲ್ಪಟ್ಟು 10 ವರ್ಷಗಳ ಒಳಗಡೆ ಶೇ.8 ಬಡ್ಡಿಯನ್ನು ಪಡೆಯಬಹುದು.

    7-8 ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್, ವಿಎಸ್‌ಎಸ್‌ಎನ್‌ಗಳು ಮುಚ್ಚುವ ಪರಿಸ್ಥಿತಿ ತಲುಪಿತ್ತು. ಇವುಗಳಿಗೆ ಬ್ಯಾಲಹಳ್ಳಿ ಗೋವಿಂದಗೌಡ ನೇತೃತ್ವದ ಆಡಳಿತ ಮಂಡಳಿ ಮರುಜೀವ ನೀಡಿದ್ದು, ಅವುಗಳನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಜವಾಬ್ದಾರಿ ಮಹಿಳೆಯರು ಮತ್ತು ಕೃಷಿಕರದ್ದಾಗಬೇಕು.
    ಆರ್.ಆರ್.ರಾಜೇಂದ್ರಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts