ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾಹಿತಿ | ಜೂ.4 ಶುಷ್ಕ ದಿನ ಘೋಷಣೆ
- ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭ
- ಸೇಂಟ್ ಸಿಸಿಲೀಸ್ ಶಾಲೆಗೆ ಕ್ಯಾಮರಾ ಕಣ್ಗಾವಲು
- ಜೂ.4ರಂದು ಬೆಳಗ್ಗೆ 5ರಿಂದ ಮಧ್ಯರಾತ್ರಿ 12ರ ವರೆಗೆ ನಿಷೇಧಾಜ್ಞೆ
- ಸಿಡಿಮದ್ದು, ಪಟಾಕಿ ಸಿಡಿಸಲು ಇಲ್ಲ ಅವಕಾಶ
ವಿಜಯವಾಣಿ ಸುದ್ದಿಜಾಲ ಉಡುಪಿ
ಲೋಕಸಭಾ ಚುನಾವಣೆಗೆ ಸಂಬಂಧಿಸಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮತ ಎಣಿಕೆ ಕಾರ್ಯ ಬ್ರಹ್ಮಗಿರಿಯಲ್ಲಿರುವ ಸೇಂಟ್ ಸಿಸಿಲೀಸ್ ಶಾಲೆಯಲ್ಲಿ ಜೂ.4ರಂದು ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದ್ದು, ಮತ ಎಣಿಕೆ ಕೇಂದ್ರಕ್ಕೆ 3 ಹಂತದ ಭದ್ರತೆ ಒದಗಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾಹಿತಿ ನೀಡಿದ್ದಾರೆ.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ಸುತ್ತಲು 100 ಮೀ. ಅಂತರದೊಳಗೆ ಯಾವುದೇ ವಾಹನಗಳಿಗೆ ಪ್ರವೇಶವಿಲ್ಲ. ಈ ವಲಯವನ್ನು ಪಾದಚಾರಿ ಮಾರ್ಗ ಎಂದೂ , ಜೂ.4ಅನ್ನು ಶುಷ್ಕ ದಿನ ಎಂದೂ ಘೋಷಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾದ್ಯಂತ ನಿಷೇಧಾಜ್ಞೆ
ಶಾಂತಿಯುತ ಹಾಗೂ ಸುರತ ಮತ ಎಣಿಕೆ ಕಾರ್ಯಕ್ಕಾಗಿ ಕೇಂದ್ರದ ಸುತ್ತ ಹಾಗೂ ಕೊಠಡಿಯ ಒಳಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಪ್ರತಿ ಎಣಿಕೆ ಮೇಜಿನ ಸಿಬ್ಬಂದಿ ಹಾಗೂ ಏಜೆಂಟರ ಮಧ್ಯೆ ಸ್ಟೀಲ್ ಜಾಲರಿ ಅಳವಡಿಸಲಾಗಿದೆ. ಜೂ.4ರಂದು ಬೆಳಗ್ಗೆ 5ರಿಂದ ಮಧ್ಯರಾತ್ರಿ 12ರ ವರೆಗೆ ನಿಷೇಧಾಜ್ಞೆ ಘೋಷಿಸಲಾಗಿದೆ. ಹೀಗಾಗಿ ಫಲಿತಾಂಶ ಹೊರಬಿದ್ದ ಬಳಿಕ ವಿಯೋತ್ಸವದ ಸಂದರ್ಭದಲ್ಲಿ ಸಿಡಿಮದ್ದು/ಪಟಾಕಿ ಸಿಡಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.
ಮಾಧ್ಯಮ ಕೇಂದ್ರ
ಮಾಧ್ಯಮದವರಿಗಾಗಿ ಮತ ಎಣಿಕೆ ಕೇಂದ್ರದ 2ನೇ ವಲಯದಲ್ಲಿ ಮಾಧ್ಯಮ ಕೇಂದ್ರ ಸ್ಥಾಪಿಸಲಾಗುವುದು. ಅಧಿಕೃತ ಪರವಾನಗಿ ಪತ್ರ ಇರದವರ ಪ್ರವೇಶ ನಿಷೇಧಿಸಲಾಗಿದೆ. ಮಾಧ್ಯಮದವರಿಗೆ ಸಹಾಯ ಒದಗಿಸಲು ಜಿಲ್ಲಾ ವಾರ್ತಾಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಮಾಧ್ಯಮ ಕೇಂದ್ರ ಹೊರತುಪಡಿಸಿ ಮತ ಎಣಿಕೆ ಕೇಂದ್ರದೊಳಗೆ ಯಾರೂ ಮೊಬೈಲ್ ತರುವಂತಿಲ್ಲ. ಮತ ಎಣಿಕೆಯ ಚಿತ್ರಣ/ದೃಶ್ಯವನ್ನು ಕ್ಯಾಮರಾ ಮೂಲಕ ನಿಗದಿತ ಸ್ಥಳದಲ್ಲಿ ನಿಂತು ಚಿತ್ರಣ ಮಾಡಲು ಮಾತ್ರ ಅವಕಾಶವಿದೆ ಎಂದರು.
ನಿಯಂತ್ರಣ ಕೊಠಡಿ
ಮತ ಎಣಿಕೆಗೆ ಸಂಬಂಧಿಸಿ ದೂರು ಅಥವಾ ಮಾಹಿತಿಗಾಗಿ ಜೂ.1ರಿಂದ ನಿಯಂತ್ರಣ ಕೊಠಡಿ ತೆರೆಯಲಾಗುತ್ತಿದ್ದು, ಜನರು ಶುಲ್ಕ ರಹಿತ ಸಂಖ್ಯೆ 1950 ಸಂಪರ್ಕಿಸಬಹುದು. ಮತ ಎಣಿಕೆ ಪರಿಶೀಲನೆಗಾಗಿ ಪ್ರತಿ ಅಭ್ಯರ್ಥಿಗೆ ಪ್ರತಿ ಮೇಜಿಗೆ ತಲಾ ಒಬ್ಬರು ಏಜೆಂಟರನ್ನು ನೇಮಿಸಲು ಅವಕಾಶವಿದೆ. ಯಾರೊಬ್ಬರಿಗೂ ಸಹ ಪೆನ್, ಹಾಳೆ, ನೋಟ್ಪ್ಯಾಡ್ ಹೊರತಾಗಿ ಬೇರಾವುದೇ ವಸ್ತು ಒಳಗೆ ತರುವಂತಿಲ್ಲ ಎಂದು ಡಿಸಿ ವಿದ್ಯಾಕುಮಾರಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ಉಪಸ್ಥಿತರಿದ್ದರು.
ಹೇಗಿರಲಿದೆ ಮತ ಎಣಿಕೆಯ ವ್ಯವಸ್ಥೆ?
ಎವಿಎಂ ಮತ ಎಣಿಕೆಗಾಗಿ ವಿಧಾನಸಭಾ ಕ್ಷೇತ್ರವಾರು ಒಟ್ಟು 12 ಕೊಠಡಿ ಸ್ಥಾಪಿಸಲಾಗಿದೆ. ಕುಂದಾಪುರ, ಕಾರ್ಕಳ, ಶೃಂಗೇರಿ, ತರೀಕೆರೆ ಕ್ಷೇತ್ರಗಳಿಗೆ ತಲಾ 2 ಕೊಠಡಿ ಹಾಗೂ ಉಡುಪಿ, ಕಾಪು, ಮೂಡಿಗೆರೆ ಹಾಗೂ ಚಿಕ್ಕಮಗಳೂರು ಕ್ಷೇತ್ರಗಳಿಗೆ ತಲಾ 1 ಕೊಠಡಿ ಸ್ಥಾಪಿಸಲಾಗಿದೆ. ಮತ ಎಣಿಕೆಯ 1 ಕೊಠಡಿ ಇರುವಲ್ಲಿ 14 ಟೇಬಲ್ ಹಾಗೂ 2 ಕೊಠಡಿ ಇರುವಲ್ಲಿ ಪ್ರತಿ ಕೊಠಡಿಯಲ್ಲಿ ತಲಾ 7 ಟೇಬಲ್ ಇಡಲಾಗುವುದು. ಇವಿಎಂ ಮತ ಎಣಿಕೆಗೆ ಚುನಾವಣಾಧಿಕಾರಿ ಹೊರತುಪಡಿಸಿ 8 ಸಹಾಯಕ ಚುನಾವಣಾಧಿಕಾರಿ ಹಾಗೂ ಹೆಚ್ಚುವರಿ 4 ಸಹಾಯಕ ಚುನಾವಣಾಧಿಕಾರಿ ನೇಮಿಸಲಾಗಿದೆ. ಅಂಚೆ ಮತಪತ್ರಗಳ ಎಣಿಕೆಗೆ 16 ಟೇಬಲ್ ಇರುವ ಪ್ರತ್ಯೇಕ ಕೊಠಡಿ ಹಾಗೂ ಸೇವಾ ಮತಗಳ ಪೂರ್ವ ಎಣಿಕೆಗಾಗಿ ಪ್ರತ್ಯೇಕ ಟೇಬಲ್ ಇಡಲಾಗಿದೆ.
ಕ್ಷೇತ್ರವಾರು ಮತದಾರರ ಮಾಹಿತಿ
ಅ.ಸಂ ಕ್ಷೇತ್ರ ಒಟ್ಟು ಮತದಾರರು ಚಲಾವಣೆಯಾದ ಮತ
1) ಕುಂದಾಪುರ 2,11838 1,67,612
2) ಉಡುಪಿ 2,21285 1,72,257
3) ಕಾಪು 1,92,599 1,52,477
4) ಕಾರ್ಕಳ 1,93,512 1,54,154
5) ಶೃಂಗೇರಿ 1,68,951 1,35,678
6) ಮೂಡಿಗೆರೆ 1,71,642 1,32,975
7) ಚಿಕ್ಕಮಗಳೂರು 2,32,210 1,64,253
8) ತರೀಕೆರೆ 1,93.125 1,43,482
9) ಅಂಚೆ ಮತಪತ್ರ 31,008 7,853
10) ಸೇವಾ ಮತದಾರರು 559 264
ಅಂಚೆಮತ ಪತ್ರ ಹಾಗೂ ಎಇವಿಎಂ ಮತ ಎಣಿಕೆ ಸಂಪೂರ್ಣಗೊಂಡ ನಂತರವೇ ವೀಕ್ಷಕರ ಅನುಮೋದನೆ ಪಡೆದು ಚುನಾವಣೆಯ ಅಂತಿಮ ಫಲಿತಾಂಶವನ್ನು ಮಧ್ಯಾಹ್ನ 3:30ರ ಹೊತ್ತಿಗೆ ಘೋಷಿಸಲಾಗುವುದು. ಚುನಾವಣಾ ಆಯೋಗದ ಅನುಮತಿ ಸ್ವೀಕರಿಸಿದ ನಂತರವೇ ವಿಜೇತ ಅಭ್ಯರ್ಥಿಗಳಿಗೆ ನಮೂನೆ 22ರಲ್ಲಿ ಪ್ರಮಾಣ ಪತ್ರ ನೀಡಲಾಗುವುದು.
ಡಾ.ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ, ಉಡುಪಿ