ಡಿಸಿ ವರ್ಗಾವಣೆ ಖಂಡಿಸಿ ರೈತರ ಪ್ರತಿಭಟನೆ

ಬೆಳಗಾವಿ: ರೈತರ ಹಿತಾಸಕ್ತಿ ಕಾಪಾಡಲು ಮುಂದಾದ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರನ್ನು ಯಾವುದೇ ಕಾರಣಕ್ಕೂ ಬೆಳಗಾವಿ ಜಿಲ್ಲೆಯಿಂದ ವರ್ಗಾವಣೆ ಮಾಡಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಆಗ್ರಹಿಸಿದರು.

ಪ್ರಾದೇಶಿಕ ಆಯುಕ್ತ ಪಿ.ಎ. ಮೇಘನ್ನವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಬೆಳಗಾವಿಯ ಜಿಲ್ಲಾಧಿಕಾರಿ ದಕ್ಷ, ಪ್ರಾಮಾಣಿಕ, ಜನಸ್ನೇಹಿ ಹಾಗೂ ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಅಧಿಕಾರಿಯಾಗಿದ್ದಾರೆ. ಜಿಲ್ಲಾಧಿಕಾರಿ ವರ್ಗಾವಣೆ ರದ್ದು ಪಡಿಸದಿದ್ದರೆ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಮಾತನಾಡಿದ ಪ್ರತಿಭಟನೆಕಾರರು, ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರನ್ನು ರಾಜಕೀಯ ದುರುದ್ದೇಶದಿಂದ ವರ್ಗಾವಣೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ಜಿಲ್ಲೆಗೆ ವರ್ಗಾವಣೆಗೊಂಡು ಎರಡು ವರ್ಷ ಪೂರ್ಣವಾಗಿಲ್ಲ.

ಕಳೆದ ಒಂದು ವರ್ಷದಲ್ಲಿ ಜಿಲ್ಲಾಧಿಕಾರಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾಲೀಕತ್ವದ ಶ್ರೀ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯ ಕಬ್ಬಿನ ಬಾಕಿ ಬಿಲ್ ರೈತರಿಗೆ ಕೊಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ರಾಜಕೀಯ ಸೇಡಿಗೆ ಜಿಲ್ಲಾಧಿಕಾರಿ ಅವರ ವರ್ಗಾವಣೆ ಪ್ರಯತ್ನ ನಡೆದಿರುವ ಸಂಶಯವಿದೆ ಎಂದು ಆರೋಪಿಸಿದರು.

ರೈತ ಧ್ವನಿಗೆ ಕಿವಿಗೊಡುತ್ತಿರುವ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರನ್ನು ಕುಮಾರಸ್ವಾಮಿ ನೇತೃತ್ವದ ಸರ್ಕಾರ ಯಾವುದೇ ಕಾರಣಕ್ಕೂ ಬೆಳಗಾವಿಯಿಂದ ವರ್ಗ ಮಾಡಬಾರದು ಎಂದು ರೈತರು ಆಗ್ರಹಿಸಿದರು.

ಚೂನಪ್ಪ ಪೂಜಾರಿ, ಅಶೋಕ ಯಮಕನಮರಡಿ, ಜಯಶ್ರೀ ಗುರನ್ನವರ, ಮಹಾದೇವ ಮಡಿವಾಳ, ಪ್ರಕಾಶ ನಾಯಕ, ಮಲ್ಲಿಕಾರ್ಜುನ ರಾಮದುರ್ಗ, ಈರಣ್ಣಾ ಸಸಾಲಟ್ಟಿ, ಇತರರು ಇದ್ದರು.