ಕುವೆಂಪು ಪ್ರತಿಷ್ಠಾನದಲ್ಲಿ 25 ಲಕ್ಷ ರೂ. ದತ್ತಿನಿಧಿ ಸ್ಥಾಪನೆ

ಶಿವಮೊಗ್ಗ: ಕುವೆಂಪು ಪ್ರತಿಷ್ಠಾನದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಿಂದ 25 ಲಕ್ಷ ರೂ.ಗಳ ದತ್ತಿನಿಧಿ ಸ್ಥಾಪಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಘೋಷಿಸಿದ್ದಾರೆ.

ತೀರ್ಥಹಳ್ಳಿ ತಾಲೂಕು ಕುಪ್ಪಳಿಯಲ್ಲಿ ಶನಿವಾರ ಕುವೆಂಪು ಅವರ 114ನೇ ಜನ್ಮದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ವಿಶ್ವಮಾನವ ದಿನಾಚರಣೆ ಹಾಗೂ ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ದತ್ತಿ ನಿಧಿಯಿಂದ ಬರುವ ವಾರ್ಷಿಕ ಬಡ್ಡಿ ಹಣದಲ್ಲಿ ಪ್ರತಿ ವರ್ಷ ಸಾಹಿತ್ಯ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು. ಬೆಂಗಳೂರಿನಲ್ಲಿ ನಿರ್ವಿುಸಲು ಉದ್ದೇಶಿಸಿರುವ ಕುವೆಂಪು ಕಲಾಮಂದಿರಕ್ಕೆ ಮುಂದಿನ ಬಜೆಟ್​ನಲ್ಲಿ ಅಗತ್ಯ ಅನುದಾನ ಒದಗಿಸಲು ಸಿಎಂಗೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪ್ರಸಕ್ತ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರವನ್ನು ಉರ್ದು ಸಾಹಿತಿಗಳಾದ ರತನ್ ಸಿಂಗ್ ಹಾಗೂ ಜಿಲಾನಿ ಬಾನು ಅವರಿಗೆ ಘೊಷಿಸಲಾಗಿತ್ತು. ಈ ಪ್ರಶಸ್ತಿ 5 ಲಕ್ಷ ರೂ. ನಗದು ಪುರಸ್ಕಾರ ಹಾಗೂ ಫಲಕ ಒಳಗೊಂಡಿದ್ದು, ಈ ವರ್ಷ ಇಬ್ಬರಿಗೆ ನಗದು ಪುರಸ್ಕಾರವನ್ನು ಸಮಾನವಾಗಿ ಹಂಚಿಕೆ ಮಾಡಲಾಗಿತ್ತು. ಅನಾರೋಗ್ಯದ ಕಾರಣದಿಂದ ಜಿಲಾನಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ರತನ್ ಸಿಂಗ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.