ಶಾಂತಿಯುತ ಹೋಳಿ ಆಚರಿಸಿ, ಗೊಂದಲ ಸೃಷ್ಟಿಸಿದರೆ ಶಿಸ್ತುಕ್ರಮ ಎಚ್ಚರಿಸಿದ ಎಸ್ಪಿ

ಬೀದರ್: ಜಿಲ್ಲೆಯಲ್ಲಿ ಶನಿವಾರವರೆಗೆ ಆಚರಿಸುತ್ತಿರುವ ಹೋಳಿ ಹಬ್ಬ ಶಾಂತ ಹಾಗೂ ಸೌಹಾರ್ದಯುತ ಇರಬೇಕು. ಬಲವಂತವಾಗಿ ಬಣ್ಣ ಎರಚುವುದು, ಇತರರಿಗೆ ಸಮಸ್ಯೆ ಉಂಟು ಮಾಡಬಾರದು. ಅನಗತ್ಯ ಗೊಂದಲ ಸೃಷ್ಟಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಹೇಳಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿ, ಮಧ್ಯಾಹ್ನ 1ರವರೆಗೆ ಮಾತ್ರ ಬಣ್ಣವನ್ನು ಆಡಲು ಅವಕಾಶವಿದೆ. ಅಪರಿಚಿತರು ಮತ್ತು ಇಷ್ಟವಿಲ್ಲದವರ ಮೇಲೆ ಬಣ್ಣ ಹಾಕುವಂತಿಲ್ಲ. ಅಶ್ಲೀಲ ಮತ್ತು ಅಸಭ್ಯ ಹಾಡು ಹಾಕಿದರೆ ಹಾಗೂ ಉದ್ದೇಶಪೂರ್ವಕವಾಗಿ ಜನರಿಗೆ ತೊಂದರೆ ಕೊಟ್ಟಲ್ಲಿ ಸುಮ್ಮನಿರಲಾಗದು. ಯಾವುದೇ ಕಾರಣಕ್ಕೂ ಅವಧಿ ಮೀರಿ ಬಣ್ಣ ಆಡುವಂತಿಲ್ಲ. ಹಬ್ಬದ ಸಂಭ್ರಮವಿರಲಿ. ಆದರೆ ಗೊಂದಲ ಬೇಡ. ಎಲ್ಲರೂ ಇಲಾಖೆಗೆ ಸಹಕರಿಸಬೇಕೆಂದು ಕೋರಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಚುನಾವಣೆ ನೀತಿ ಸಂಹಿತೆ ಸಹ ಜಾರಿಯಲ್ಲಿರುವ ಕಾರಣ ಅಗತ್ಯ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ವಿವಿಧೆಡೆ 1400 ಜನ ಸಿಬ್ಬಂದಿ ಬಂದೋಬಸ್ತ್ಗಾಗಿ ನಿಯೋಜಿಸಿದ್ದು, ಚೆಕ್ಪೋಸ್ಟ್ಗಳಲ್ಲಿ ಪೊಲೀಸ್ ಸಿಬ್ಬಂದಿ 24 ಗಂಟೆಯೂ ಕರ್ತವ್ಯದಲ್ಲಿರುತ್ತಾರೆ. ಕೆಲವು ವಿವಾದಾಸ್ಪದ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇರಿಸಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ಎಚ್.ಆರ್.ಮಹಾದೇವ ಹಬ್ಬದ ಕುರಿತು ಆಡಳಿತ ವಹಿಸಿರುವ ಕ್ರಮಗಳನ್ನು ವಿವರಿಸಿದರು. ಪ್ರಮುಖರಾದ ಶಿವಶರಣಪ್ಪ ವಾಲಿ, ವೀರಶೆಟ್ಟಿ ಖ್ಯಾಮಾ, ಮನ್ಸೂರ್ ಖಾದ್ರಿ ಮಾತನಾಡಿದರು. ಅಪರ ಡಿಸಿ ರುದ್ರೇಶ ಗಾಳಿ, ಹೆಚ್ಚುವರಿ ಎಸ್ಪಿ ಎಸ್.ಬಿ.ಪಾಟೀಲ್ ಇತರರಿದ್ದರು.