ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ

ಬಾಗಲಕೋಟೆ: ಶಿಕ್ಷಣದಿಂದ ವಂಚಿತರಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಗ್ರಾಮವಾರು ಗುರುತಿಸಲು ನ.17 ರಿಂದ 28ರ ವರೆಗೆ ಸಮೀಕ್ಷೆ ನಡೆಯಲಿದೆ. ಶಿಕ್ಷಣಾಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ಆಸಕ್ತಿಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ. ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ತಮ್ಮ ಅಧ್ಯಕ್ಷತೆಯಲ್ಲಿ ಈ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 1315 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಅಂಥ ಮಕ್ಕಳ ಪತ್ತೆ ಹಚ್ಚಲು ಶಿಕ್ಷಣ ಇಲಾಖೆಯ ಎಲ್ಲ ಸಿಬ್ಬಂದಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ಶಿಕ್ಷಣ ಇಲಾಖೆಯ ಎಲ್ಲ ಶಿಕ್ಷಕರು, ಪಿಡಿಒಗಳು, ಆಶಾ-ಅಂಗನವಾಡಿ ಕಾರ್ಯಕರ್ತೆಯರು ತಂಡ ರಚಿಸಿಕೊಂಡು ಮನೆ ಮನೆ ಭೇಟಿ ನೀಡಿ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ನಿಗದಿತ ನಮೂನೆ ತುಂಬಬೇಕು ಎಂದರು.

ತಲಾ 50 ಮೆನಗೊಬ್ಬ ಶಿಕ್ಷಕರಂತೆ ನಿಯುಕ್ತಿಗೊಳಿಸಿ ಪ್ರತಿ ಮನೆಗೆ ಭೇಟಿ ನೀಡಿ ವಿವರ ಪಡೆಯಬೇಕು. ಸಮೀಕ್ಷೆ ಮುಗಿದ ತಕ್ಷಣ ಆಯಾ ಮನೆಗೆ ಸ್ಟಿಕರ್ಸ್ ಅಂಟಿಸಬೇಕು. ಮನೆಗಳ ಪಟ್ಟಿಯನ್ನು ಪಿಡಿಒಗಳಿಂದ ಪಡೆದು ಸಮೀಕ್ಷೆ ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.

ಒಂದು ಗ್ರಾಮ ಪಂಚಾಯಿತಿಗೆ ಹೈಸ್ಕೂಲ್ ಶಿಕ್ಷಕರನ್ನು ಸೂಪರ್​ವೈಜರ್​ಗಳಾಗಿ, ಹೋಬಳಿವಾರು ಬಿಆರ್​ಸಿಗಳು ಕೋ ಆರ್ಡಿನೇಟರ್ ಹಾಗೂ ಬಿಇಒಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ವಾಟ್ಸ್​ಆಪ್ ಗ್ರೂಪ್ ಮಾಡಬೇಕು. ಗ್ರಾಮ ಪಂಚಾಯಿತಿ ಸೂಪರ್​ವೈಜರ್​ಗಳು ಒಟ್ಟು ಮನೆಗಳ ಶೇ.10ರಷ್ಟು ಮನೆಗಳಿಗೆ ಕಡ್ಡಾಯವಾಗಿ ಹಾಗೂ ಹೋಬಳಿ ನೋಡಲ್ ಅಧಿಕಾರಿಗಳು ಶೇ.2ರಷ್ಟು ಮನೆಗಳಿಗೆ ತಪ್ಪದೇ ಭೇಟಿ ನೀಡಿ ಸಮೀಕ್ಷೆಯಾಗಿರುವ ಬಗ್ಗೆ ಖಚಿತಪಡಿಸಬೇಕು ಎಂದು ತಿಳಿಸಿದರು.

ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ ಮಾತನಾಡಿ, ಗ್ರಾಮಸಭೆಗಳಲ್ಲಿ ಈ ಅಂಶವನ್ನು ಪ್ರಮುಖ ಆದ್ಯತೆಯಾಗಿ ರ್ಚಚಿಸಬೇಕು. ಶಾಲೆಯಿಂದ ಹೊರಗುಳಿದ ಪ್ರತಿ ಮಗುವಿನ ವಿವರ, ತಂದೆ-ತಾಯಿ ವಿವರ ಹಾಗೂ ಭಾವಚಿತ್ರವನ್ನು ನಮೂನೆಯಲ್ಲಿ ನಮೂದಿಸಬೇಕು ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್.ಕಾಮಾಕ್ಷಿ ಮಾತನಾಡಿ, ಬಾದಾಮಿ ತಾಲೂಕಿನಲ್ಲಿ 219, ಬಾಗಲಕೋಟೆ 80, ಬೀಳಗಿ 71, ಹುನಗುಂದ 261, ಜಮಖಂಡಿ 261, ಮುಧೋಳ ತಾಲೂಕಿನಲ್ಲಿ 268 ಮಕ್ಕಳು ಶಾಲೆಯಿಂದ ಹೊರಗುಳಿದ್ದಾರೆಂದು ಸಭೆಗೆ ತಿಳಿಸಿದರು. ಪ್ರಚಾರದ ಪೋಸ್ಟರ್​ಗಳನ್ನು ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *