ವಾರ್ ರೂಂ ಆಗಿ ಕಾರ್ಯನಿರ್ವಹಿಸಿದ ಡಿಸಿ ಕಚೇರಿ

<<ಎರಡೆರಡು ಕಂಟ್ರೋಲ್ ರೂಂ ಮೂಲಕ ನಿಗಾ>>

ವಿಜಯವಾಣಿ ಸುದ್ದಿಜಾಲ ಮಂಗಳೂರು
ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎರಡೆರಡು ಕಂಟ್ರೋಲ್ ರೂಂಗಳು ಅವಿರತ ಕಾರ್ಯ ನಿರ್ವಹಿಸಿದವು.

ಮೂರನೇ ಮಹಡಿಯ ಜಿಲ್ಲಾಧಿಕಾರಿ ಕೋರ್ಟ್ ಕಚೇರಿಯನ್ನು ವ್ಯವಸ್ಥಿತ ಕಂಟ್ರೋಲ್ ರೂಮ್ ಆಗಿ ಪರಿವರ್ತಿಸಲಾಗಿತ್ತು. ಜಿಲ್ಲಾ ಮುಖ್ಯ ಚುನಾವಣಾಧಿಕಾರಿಯೂ ಆಗಿರುವ ಶಶಿಕಾಂತ್ ಸೆಂಥಿಲ್ ನೇತೃತ್ವದಲ್ಲಿ ಇದು ಕಾರ್ಯವೆಸಗಿದೆ. ಚುನಾವಣಾ ಪ್ರಕ್ರಿಯೆ ನಿರ್ವಹಣೆಗೆಂದೇ ಪ್ರತ್ಯೇಕ ಜಿಪಿಎಸ್ ಆಧರಿತ ಸಾಫ್ಟ್‌ವೇರ್ ವ್ಯವಸ್ಥೆ ಮಾಡಲಾಗಿದ್ದು, ಕಂಪ್ಯೂಟರ್ ಮಾನಿಟರ್‌ನಲ್ಲೇ ಇದನ್ನು ನೋಡಿ ನಿಯಂತ್ರಿಸಲಾಗುತ್ತಿತ್ತು.
ಪ್ರತಿ ಮತಗಟ್ಟೆಗಳು, ಅದರ ವಿವರ, ಮತಗಟ್ಟೆ ಅಧಿಕಾರಿಯ ಸಂಪರ್ಕದ ವಿವರ, ದಾರಿ ನಕ್ಷೆ, ಸೆಕ್ಟರ್ ಅಧಿಕಾರಿಗಳ ವಿವರ ಇತ್ಯಾದಿಗಳನ್ನೊಳಗೊಂಡ ಈ ಸಾಫ್ಟ್‌ವೇರ್ ಮೂಲಕ ಮತದಾನ ಪ್ರಕ್ರಿಯೆಯನ್ನು ನಿರ್ವಹಣೆ ಮಾಡಲಾಗಿದೆ.

ಮೊದಲ ಮಹಡಿಯಲ್ಲಿ ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ ಅವರ ನೇತೃತ್ವದಲ್ಲಿ ಇದ್ದಂತಹ ಕಂಟ್ರೋಲ್ ರೂಂ ಮತದಾರರ, ನಾಗರಿಕರ ಮತದಾನಕ್ಕೆ ಸಂಬಂಧಿಸಿದಂತೆ 1950 ದೂರವಾಣಿಗೆ ಬರುತ್ತಿದ್ದ ದೂರುಗಳನ್ನು ನಿರ್ವಹಣೆ ಮಾಡಿತು. ಅನೇಕ ಕಡೆಗಳಲ್ಲಿ ಸಂಸ್ಥೆಗಳು, ಕಚೇರಿಗಳು ಮತದಾನಕ್ಕೆ ಹೋಗುವುದಕ್ಕೆ ತಮಗೆ ರಜೆ ಕೊಟ್ಟಿಲ್ಲ ಎಂಬ ಬಗ್ಗೆ, ಕೆಲವೆಡೆ ವಿವಿಪಾಟ್, ಮತಯಂತ್ರಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಬಗ್ಗೆ ದೂರುಗಳು ಬರುತ್ತಿದ್ದವು. ಒಂದಿಬ್ಬರು ನಾಗರಿಕರೂ ಕಂಟ್ರೋಲ್ ರೂಮಿಗೇ ಸ್ವತಃ ಆಗಮಿಸಿ ದೂರು ನೀಡಿದರು. ಕೆಲವು ಕಚೇರಿಗಳಿಗೆ ಅಪರ ಜಿಲ್ಲಾಧಿಕಾರಿಯವರೇ ಸಂಪರ್ಕಿಸಿ, ಮತದಾನಕ್ಕೆ ಬಿಡುವಂತೆ ಸೂಚನೆ ನೀಡಿದರು. ಇದಕ್ಕೆ ಸಂಸ್ಥೆಗಳ ಮುಖ್ಯಸ್ಥರೂ ಒಪ್ಪಿಕೊಂಡರು. ಮತಯಂತ್ರ ಕೆಟ್ಟಿರುವುದಕ್ಕೂ ಪರ್ಯಾಯ ವ್ಯವಸ್ಥೆ ಮಾಡಲಾಯಿತು.