ಡಿಸಿ ಕಚೇರಿ ಮುಂಭಾಗ ರೈತರ ಪ್ರತಿಭಟನೆ

ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹೆಚ್ಚುವರಿ ನೀರನ್ನು ನಾರಾಯಣಪುರ ಜಲಾಶಯಕ್ಕೆ ಹರಿಸಬಾರದು ಎಂದು ಆಗ್ರಹಿಸಿ ಬೀಳಗಿ ಹಾಗೂ ಬಾಗಲಕೋಟೆ ತಾಲೂಕಿನ ವಿವಿಧ ಗ್ರಾಮದ ರೈತರು ಜಿಲ್ಲಾಡಳಿತ ಭವನ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ರೈತರು ಅಧಿಕಾರಿಗಳ ವಿರುದ್ಧ ಘೊಷಣೆ ಕೂಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬಾಗಲಕೋಟೆ, ಬೀಳಗಿ ತಾಲೂಕಿಗೆ ಕೃಷ್ಣಾ ಹಾಗೂ ಘಟಪ್ರಭಾ ನದಿಗಳು ಜೀವನಾಡಿಯಾಗಿವೆ. ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಘಟಪ್ರಭಾ ಹಾಗೂ ಕೃಷ್ಣಾ ನದಿಗಳು ತುಂಬಿ ಹರಿಯುತ್ತಿವೆ. ರೈತರು ಈ ನದಿಗಳನ್ನು ನಂಬಿ ಬಿತ್ತನೆ, ಕೃಷಿ ಚಟುವಟಿಕೆ ಮಾಡುತ್ತಾರೆ. ನಾರಾಯಣಪುರ ಜಲಾಶಯಕ್ಕೆ ಆಲಮಟ್ಟಿ ನೀರು ಹರಿಸುವುದರಿಂದ ಈ ನದಿಗಳು ಬೇಸಿಗೆ ಬರುವುದಕ್ಕಿಂತ ಮೊದಲು ಖಾಲಿಯಾಗುತ್ತವೆ. ಇದರಿಂದ ಕೃಷಿಚಟುವಟಿಕೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಆಲಮಟ್ಟಿ ಜಲಾಶಯಕ್ಕಾಗಿ ಸಾವಿರಾರು ರೈತ ಕುಟುಂಬಗಳು ಆಸ್ತಿ,ಪಾಸ್ತಿ ಕಳೆದುಕೊಂಡಿದ್ದಾರೆ. ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಉಳುಮೆ ಮಾಡಿ ಬದುಕುತ್ತಿದ್ದಾರೆ. ಕೃಷ್ಣಾ ಮತ್ತು ಘಟಪ್ರಭಾ ನದಿ ತೀರದಲ್ಲಿನ ಗ್ರಾಮಗಳ ಸಂತ್ರಸ್ತರು ಮತ್ತು ರೈತರಿಗೆ ಬೇಸಿಗೆ ಕಾಲದಲ್ಲಿ ವ್ಯವಸಾಯ ಮತ್ತು ಕುಡಿಯುವ ನೀರಿನ ತೀವ್ರ ಸಮಸ್ಯೆಯಾಗುತ್ತದೆ. ಆದ್ದರಿಂದ ನಾರಾಯಣಪುರ ಜಲಾಶಯಕ್ಕೆ ಆಲಮಟ್ಟಿ ಜಲಾಶಯದ ಹೆಚ್ಚುವರಿ ನೀರನ್ನು ಹರಿಸಬಾರದು ಎಂದು ಆಗ್ರಹಿಸಿದರು. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 519.60 ಮೀಟರ್​ನಷ್ಟಿದ್ದ ನೀರು ಇಂದು 516.93 ಮೀಟರ್​ನಷ್ಟಿದೆ. ನಿತ್ಯವೂ 14133 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಗೆ ಹರಿಸುತ್ತಿರುವ ಪರಿಣಾಮ ಕೆಲವೇ ದಿನಗಳಲ್ಲಿ ಭೀಕರ ಜಲಕ್ಷಾಮ ಆಗುವ ಲಕ್ಷಣಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಕೃಷ್ಣಾ ಜಲಭಾಗ್ಯ ನಿಗಮದ ಅಧಿಕಾರಿಗಳು ವಾರಾಬಂದಿ ಅಂಶಗಳನ್ನು ಪಾಲನೆ ಮಾಡುತ್ತಿಲ್ಲ. ಮನಸ್ಸಿಗೆ ತಿಳಿದಂತೆ ನಾರಾಯಣಪುರ ಜಲಾಶಯಕ್ಕೆ ನೀರು ಹರಿ ಬಿಡುತ್ತಿದ್ದಾರೆ. ಕೂಡಲೇ ಈ ಬಗ್ಗೆ ಸಂಬಂಧಟ್ಟವರು ಗಮನ ಹರಿಸಿ ಜಲಭಾಗ್ಯ ನಿಗಮದ ಅಧಿಕಾರಿಗಳಿಗೆ ನೀರು ಹರಿಸದಂತೆ ಸೂಚನೆ ನೀಡಬೇಕು. ಇಲ್ಲವಾದಲ್ಲಿ ಉಗ್ರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಜಿಪಂ ಸದಸ್ಯ ಹೂವಪ್ಪ ರಾಠೋಡ, ಅದೃಷಪ್ಪ ದೇಸಾಯಿ, ಎಸ್.ಎಂ.ಕಟಗೇರಿ, ಮಲ್ಲಪ್ಪ ಶಂಭೋಜಿ, ತಿಮ್ಮಣ್ಣ ಅಂಬಲಝುರಿ,ಬೆನ್ನೆಪ್ಪ ಬೀಳಗಿ, ಶಶಿಕಾಂತಗೌಡ ಪಾಟೀಲ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಇದ್ದರು.