ಸಿದ್ಧಗಂಗಾ ಸ್ವಾಮೀಜಿಗೆ ಭಾರತ ರತ್ನ ನೀಡಿ

ಬಾಗಲಕೋಟೆ: ತ್ರಿವಿಧ ದಾಸೋಹಿ ತುಮಕೂರು ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡದೆ ಅವಮಾನ ಮಾಡಿದೆ. ಈ ಕೂಡಲೆ ಮರಣೋತ್ತರ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮಹಿಳಾ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ನಗರದ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ದುರುಗೇಶ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ ಮಾತನಾಡಿ, ತ್ರಿವಿಧ ದಾಸೋಹಿಗಳಾದ ಡಾ.ಶಿವಕುಮಾರ ಸ್ವಾಮೀಜಿ ನೀಡಿದ ಸೇವೆ ಅನನ್ಯವಾಗಿದೆ. ಸಿದ್ದ ರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಕೇಂದ್ರ ಸರ್ಕಾರಕ್ಕೆ ನಾಲ್ಕು ಸಾರಿ ಪತ್ರ ಬರೆದು ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಮನವಿ ಮಾಡಿದ್ದರು. ಕೇಂದ್ರ ಸರ್ಕಾರ ಇಲ್ಲ ಸಲ್ಲದ ನಿಯಮ ನೆಪ ಹೇಳಿ ಭಾರತ ರತ್ನ ನೀಡದೆ ಅಪಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಮುಖಂಡ ನಾಗರಾಜ ಹದ್ಲಿ ಮಾತನಾಡಿ, ಸಿದ್ಧಗಂಗಾ ಸ್ವಾಮೀಜಿ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ದಾಸೋಹ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರಿಗೆ ಪ್ರಶಸ್ತಿ ನೀಡುವುದರಿಂದ ಪ್ರಶಸ್ತಿಗೆ ತೂಕ ಹೆಚ್ಚಾಗುತ್ತಿತ್ತು, ಆದರೆ, ಪ್ರಶಸ್ತಿಗೆ ಶ್ರೀಗಳನ್ನು ಸರ್ಕಾರ ಪರಿಗಣಿಸದೇ ಅನ್ಯಾಯ ಮಾಡಿದೆ ಎಂದು ದೂರಿದರು.

ಮಾಜಿ ಸಚಿವ ಎಚ್.ವೈ. ಮೇಟಿ, ಮುತ್ತು ಜೋಳದ, ಮಹೇಶ ಗದ್ದನಕೇರಿ, ಭರತ ಈಟಿ, ಮಂಜು ವಾಸನದ, ಜಿಪಂ ಸದಸ್ಯೆ ಹಣಮವ್ವ ಕರೆಹೊಳೆ ,ಕಲಾವತಿ ಕಾಮತ್, ಗಂಗಾ ರಾಠೋಡ, ರಾಜಮಾ ಬಿಪಾರೆ ಇತರರು ಇದ್ದರು.

Leave a Reply

Your email address will not be published. Required fields are marked *