ಖಾಕಿ ಬಲೆಗೆ ಬೀಳದ ಚಾಲಾಕಿ ವಂಚಕ

2 Min Read
ಖಾಕಿ ಬಲೆಗೆ ಬೀಳದ ಚಾಲಾಕಿ ವಂಚಕ
DC office

*ಡಿಸಿ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ವಾಟ್ಸ್‌ಆ್ಯಪ್ ಡಿಪಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಭಾವಚಿತ್ರ ಬಳಸಿದ್ದ ಅನಾಮಿಕನೊಬ್ಬ ಹಲವು ಪೊಲೀಸರಿಗೆ ವಾಟ್ಸ್‌ಆ್ಯಪ್ ಸಂದೇಶ ರವಾನಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಕುರಿತು ವಿಶ್ವನಾಥಪುರ ಠಾಣೆಯಲ್ಲಿ ದೂರು ದಾಖಲಾಗಿರುವ ಪ್ರಕರಣ ಸಂಬಂಧ ಪೊಲೀಸರ ತೀವ್ರ ತನಿಖೆಯ ನಡುವೆಯೂ ಚಾಲಾಕಿ ವಂಚಕ ಖಾಕಿ ಬಲೆಗೆ ಬಿದ್ದಿಲ್ಲ.
ಪ್ರಕರಣ ದಾಖಲಾಗಿ ಒಂದೂವರೆ ತಿಂಗಳು ಕಳೆದರೂ ವಂಚಕ ಪೊಲೀಸರ ಕೈಗೆ ಸಿಕ್ಕಿಲ್ಲ, ೇಕ್ ನಂಬರ್‌ನಿಂದ ಸಂದೇಶ ಕಳುಹಿಸಿರುವುದರಿಂದ ವಂಚಕನ ಜಾಡು ಹಿಡಿಯುವುದು ಪೊಲೀಸರಿಗೆ ತಲೆನೋವಾಗಿದೆ.
ಪೊಲೀಸರಿಗೂ ಗಾಳ: ಮೇ 9ರಂದು ಹಲವು ಪೊಲೀಸರ ಮೊಬೈಲ್‌ಗೂ ಸಂದೇಶ ಬಂದಿದೆ. ಜಿಲ್ಲಾಧಿಕಾರಿ ಹಣ ಕೇಳುತ್ತಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಿದಾಡಿತ್ತು. ಅದರಲ್ಲಿ ವಿಜಯಪುರ ಠಾಣೆ ಇನ್‌ಸ್ಪೆಕ್ಟರ್ ಪ್ರಶಾಂತ್ ನಾಯಕ್, ಚನ್ನರಾಯಪಟ್ಟಣ ಠಾಣೆ ಪಿಎಸ್‌ಐ ಅಪ್ಪಣ್ಣ, ವಿಶ್ವನಾಥಪುರದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‌ಐ ನಂದೀಶ್ ಸೇರಿ ಹಲವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಬಂದಿತ್ತು ಎನ್ನಲಾಗಿದೆ. ಡಿಪಿಯಲ್ಲಿ ಜಿಲ್ಲಾಧಿಕಾರಿ ಭಾವಚಿತ್ರವಿದ್ದ ಕಾರಣದಿಂದ ಕೆಲಕಾಲ ಪೊಲೀಸರು ಅವಕ್ಕಾಗಿದ್ದಾರೆ. ಕಡೆಗೆ ಪೊಲೀಸರು ಇದನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಸರ್ಕಾರಿ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಜಿಲ್ಲಾಧಿಕಾರಿಯೂ ಈ ವಿಷಯ ತಿಳಿದು ಶಾಕ್ ಆಗಿದ್ದರು.
ಸಂದೇಶದಲ್ಲಿ ಏನಿದೆ?: ನಾನು ಮುಖ್ಯವಾದ ಮೀಟಿಂಗ್‌ನಲ್ಲಿದ್ದೇನೆ ಪ್ರಾಜೆಕ್ಟ್‌ವೊಂದಕ್ಕೆ ತುರ್ತಾಗಿ 50 ಸಾವಿರ ರೂಪಾಯಿ ಹಣ ಬೇಕಾಗಿದೆ. ಹಣವನ್ನು ತಕ್ಷಣ ಕನಕರಾಜು ಎಂಬುವವನಿಗೆ ಕಳುಹಿಸಿಕೊಡಿ ಎಂಬ ಸಂದೇಶ ರವಾನೆಯಾಗಿದೆ. ಪೊಲೀಸರಷ್ಟೇ ಅಲ್ಲದೆ ಆಯಕಟ್ಟಿನ ಜಾಗದಲ್ಲಿರುವ ಹಲವು ಹಿರಿಯ ಅಧಿಕಾರಿಗಳ ಸಂಖ್ಯೆಗೂ ಇದೇ ಾರ್ವಡ್ ಸಂದೇಶ ರವಾನೆಯಾಗಿತ್ತು.
ಈ ಸಂಬಂಧ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಅವರ ಆಪ್ತ ಸಹಾಯಕ ಅಭೀಷೇಕ್ ಜಿಲ್ಲಾಧಿಕಾರಿ ಸೂಚನೆಯಂತೆ ವಿಶ್ವನಾಥಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಹಿಂದೆಯೂ ಆಗಿತ್ತು!: ಈ ಹಿಂದೆಯೂ ತಹಸೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳ ಹೆಸರಿನಲ್ಲಿ ಹಣ ಸುಲಿಗೆಗೆ ಸಂಚು ರೂಪಿಸಿರುವ ಪ್ರಕರಣಗಳು ಠಾಣೆ ಮೆಟ್ಟಿಲೇರಿವೆ. ಇಂಥ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದ್ದರಿಂದ ವಂಚಕರು ನಾನಾ ಬಗೆಯಲ್ಲಿ ವಂಚನೆಯ ಗಾಳ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ವಾಟ್ಸ್‌ಆ್ಯಪ್ ಡಿಪಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಭಾವಚಿತ್ರ ಬಳಸಿದ್ದ ವಂಚಕ ಹಲವರಿಗೆ ಹಣದ ಬೇಡಿಕೆ ಇಟ್ಟಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸೈಬರ್ ಕ್ರೈಂ ಪೊಲೀಸರ ಸಹಕಾರದಲ್ಲಿ ವಂಚಕನ ಪತ್ತೆಗೆ ಬಲೆ ಬೀಸಲಾಗಿದೆ. ೇಕ್ ನಂಬರ್ ಬಳಸಿ ಕೃತ್ಯ ಎಸಗಿದ್ದು, ಈತನ ತಲಾಶ್ ಮುಂದುವರಿದಿದೆ.

See also  ತೆಂಕಲಗೋಡು ಬೃಹನ್ ಮಠದ ಪೀಠಾಧ್ಯಕ್ಷರು ಲಿಂಗೈಕ್ಯ

ವಿಶ್ವನಾಥಪುರ ಠಾಣಾಧಿಕಾರಿ

ಜಿಲ್ಲಾಧಿಕಾರಿ ಭಾವಚಿತ್ರವನ್ನು ವಾಟ್ಸ್‌ಆ್ಯಪ್ ಡಿಪಿಯಲ್ಲಿ ಹಾಕಿಕೊಂಡು ಕೆಲವು ಪೊಲೀಸರು ಸೇರಿ ಹಲವು ಸರ್ಕಾರಿ ಅಧಿಕಾರಿಗಳಿಗೆ ಹಣಕ್ಕೆ ಬೇಡಿಕೆ ಇಟ್ಟು ಸಂದೇಶ ರವಾನಿಸಿ ವಂಚನೆ ಎಸಗುವ ಸಂಚು ರೂಪಿಸಿದ್ದ ಅಪರಿಚಿತನ ವಿರುದ್ಧ ಕ್ರಮಕೈಗೊಳ್ಳುವಂತೆ ವಿಶ್ವನಾಥಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಭಿಷೇಕ್, ಜಿಲ್ಲಾಧಿಕಾರಿ ಆಪ್ತ ಸಹಾಯಕ

Share This Article