More

    ಅನುದಾನ ನಿರೀಕ್ಷೆಯಲ್ಲಿ ಡಿಸಿ ಕಾಂಪ್ಲೆಕ್ಸ್!, ಹೊಸ ಸರ್ಕಾರದಿಂದ 2ನೇ ಅಂದಾಜುಪಟ್ಟಿಗೆ ಅನುಮೋದನೆ ಸಾಧ್ಯತೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಕಾಮಗಾರಿ ಪಡೀಲ್‌ನಲ್ಲಿ ಆರಂಭಗೊಂಡು 6 ವರ್ಷವಾದರೂ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ.

    ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಡಿಸಿ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡಿತ್ತು. ಆದರೆ, ಅನಂತರ ಅನುದಾನ ಕೊರತೆ ಕಾರಣಕ್ಕೆ ಕಾಮಗಾರಿ ಹಿನ್ನಡೆ ಕಂಡಿತು. ಇದೀಗ ಮತ್ತೆ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, 2ನೇ ಅಂದಾಜುಪಟ್ಟಿಗೆ ಅನುಮೋದನೆ ಸಾಧ್ಯತೆ ಹೆಚ್ಚಿದೆ. 2014ರಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿತ್ತು. ಅರಣ್ಯ ಇಲಾಖೆ ಜಾಗದ ಹಸ್ತಾಂತರ ಹಾಗೂ ಮರ ಕಡಿಯುವ ವಿರುದ್ಧ ತಡೆಯಾಜ್ಞೆ ಇದ್ದುದರಿಂದ ಚೆನ್ನೈಯ ಗ್ರೀನ್ ಟ್ರಿಬ್ಯೂನಲ್‌ನಲ್ಲಿ ವ್ಯಾಜ್ಯ ಮುಗಿದು, 2018ರ ಮಾರ್ಚ್‌ನಲ್ಲಿ ಗೃಹ ನಿರ್ಮಾಣ ಮಂಡಳಿ ಕಾಮಗಾರಿ ಆರಂಭಿಸಿತ್ತು.

    *76 ಕೋಟಿ ರೂ. ತಲುಪಿದ ಯೋಜನಾ ವೆಚ್ಚ: 2.26 ಲಕ್ಷ ಚದರ ಅಡಿ ಪ್ರದೇಶದಲ್ಲಿ 41 ಕೋಟಿ ರೂ.ವೆಚ್ಚದಲ್ಲಿ ಡಿಸಿ ಕಚೇರಿ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆಕರ್ಷಕ ಪಾರಂಪರಿಕ ಶೈಲಿ ಕಟ್ಟಡ ನಿರ್ಮಿಸಲು ಆರಂಭದಲ್ಲಿ 41 ಕೋಟಿ ರೂ. ಮೊತ್ತದ ಯೋಜನೆಯಿದ್ದರೂ ನಂತರ 55 ಕೋಟಿಗೆ ಹೆಚ್ಚಿಸಲಾಯಿತು. 2019ರ ಸೆ.16ಕ್ಕೆ ಪ್ರಥಮ ಹಂತದ ಕಾಮಗಾರಿ ಮುಗಿಯಬೇಕಿತ್ತು. ಒಂದನೇ ಹಂತದ 55 ಕೋಟಿ ರೂ. ಮೊತ್ತದಲ್ಲಿ ಗುತ್ತಿಗೆದಾರರಿಗೆ 51 ಕೋಟಿ ರೂ.ಬಿಡುಗಡೆಯಾಗಿದೆ. ಆದರೆ ಬದಲಾದ ಪರಿಸ್ಥಿಯಲ್ಲಿ ಒಟ್ಟು ಯೋಜನಾ ವೆಚ್ಚ 76 ಕೋಟಿ ರೂ. ತಲುಪಿತ್ತು. ಯೋಜನೆ ಪೂರ್ಣಗೊಳಿಸಲು ಎರಡನೇ ಹಂತದಲ್ಲಿ 29 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿ, 3 ವರ್ಷಗಳ ಹಿಂದೆ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

    ಎರಡನೇ ಹಂತದ ಕಾಮಗಾರಿ ಮೊಟಕು

    ಬಹುತೇಕ ಕಟ್ಟಡ, ಮೇಲ್ಛಾವಣಿ, ಬಾಗಿಲು, ರೇಲಿಂಗ್ ಕೆಲಸ ಮುಗಿದಿದೆ. ಎರಡನೇ ಹಂತದ ಕಾಮಗಾರಿಯಲ್ಲಿ ಕಟ್ಟಡದ ಫಿನಿಶಿಂಗ್, ವಿದ್ಯುತ್ ಸಂಪರ್ಕ, ಇಲೆಕ್ಟ್ರಿಕಲ್ ಕೆಲಸ, ಕಟ್ಟಡದ ಮೇಲ್ಭಾಗದಲ್ಲಿ ಅಶೋಕ ಸ್ತಂಭ, ಎರಡು ಲಿಫ್ಟ್ೃ, ಹಾಲ್, ಎಸಿ, ಕುರ್ಚಿ ಸಹಿತ ಪೀಠೋಪಕರಣ, ಕೇಬಲ್ ನೆಟ್‌ವರ್ಕ್, ಪೇಂಟಿಂಗ್, ಕಟ್ಟಡದ ಬಳಿ ಮಳೆ ನೀರು ಹರಿಯುವ ಚರಂಡಿ ಅಭಿವೃದ್ಧಿ, ಆವರಣ ಗೋಡೆ ಮತ್ತು ಸಂಪೂರ್ಣ ಇಂಟರ್‌ಲಾಕ್ ಅಳವಡಿಕೆ ಸೇರಿದೆ. 2020ರ ಮಾರ್ಚ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಸರ್ಕಾರದ ಮಟ್ಟದಲ್ಲಿ ಬಿಡುಗಡೆ ಆಗಬೇಕಿದ್ದ ಅನುದಾನ ಸೇರಿದಂತೆ ಇನ್ನಿತರ ಕೆಲಸ ನಿಧಾನಗತಿಯಲ್ಲಿ ಸಾಗಿದ್ದರಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಸರ್ಕಾರದ ಅನುಮೋದನೆ, ಅನುದಾನ ಸಿಗದೆ ಕಾಮಗಾರಿ ಮುಂದುವರಿಯುತ್ತಿಲ್ಲ.

    ಪಾರಂಪರಿಕ ಕಟ್ಟಡ ವಿನ್ಯಾಸ

    ಕರಾವಳಿಯ ಪಾರಂಪರಿಕ ಶೈಲಿಯಲ್ಲಿ ಈ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. 5.8 ಎಕರೆ ಜಾಗದಲ್ಲಿ 2.26 ಲಕ್ಷ ಚದರ ಅಡಿಯ ಮೂರು ಮಹಡಿಗಳ ಕಟ್ಟಡ ನಿರ್ಮಿಸಲಾಗುತ್ತಿದೆ. ಕಂದಾಯ ಇಲಾಖೆ ಸಹಿತ 38 ಇಲಾಖೆಗಳಿಗೆ ಕಚೇರಿ ನಿರ್ಮಿಸಲಾಗುತ್ತಿದೆ. ನೆಲ ಅಂತಸ್ತಿನಲ್ಲಿ 400 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯದ ಸಭಾಂಗಣ, ಎರಡನೇ ಮಹಡಿಯಲ್ಲಿ ಎರಡು ಮೀಟಿಂಗ್ ಹಾಲ್, ಡಿಸಿ ಕೋರ್ಟ್ ಹಾಲ್, ಸಂಸದ, ಸಚಿವ, ಶಾಸಕರ ಕಚೇರಿ ಇರಲಿದೆ. 175ರಿಂದ 200 ವಾಹನ ನಿಲುಗಡೆಗೆ ವ್ಯವಸ್ಥೆ ಈ ಕಟ್ಟಡದಲ್ಲಿರಲಿದೆ.

    ಜಿಲ್ಲಾಧಿಕಾರಿ ಕಚೇರಿಯ ನೂತನ ಕಟ್ಟದ ಮೊದಲ ಹಂತದ ಬಹುತೇಕ ಕಾಮಗಾರಿ ಮುಗಿದಿದೆ. ಎರಡನೇ ಹಂತದ ಕೆಲವು ಕಾಮಗಾರಿ ಬಾಕಿ ಇದೆ. ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಶೀಘ್ರದಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಸಾರ್ವಜನಿಕ ಸೇವೆಗೆ ಮುಕ್ತ ವಾಗಲಿದೆ.

    ಡಿ.ವೇದವ್ಯಾಸ ಕಾಮತ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts