ನೋಂದಣಿ ಚುರುಕಿಗೆ ಡಿಸಿ ಸೂಚನೆ

ವಿಜಯವಾಣಿ ಸುದ್ದಿಜಾಲ ಹಾವೇರಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯ ರೈತರ ನೋಂದಣಿ ಪ್ರಕ್ರಿಯೆ ಅಭಿಯಾನದ ಮಾದರಿಯಲ್ಲಿ ಕೈಗೊಂಡು 10 ದಿನದೊಳಗಾಗಿ ಪೂರ್ಣ ಗೊಳಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ರೈತರ ನೋಂದಣಿ ಕುರಿತಂತೆ ಪೂರ್ವಸಿದ್ಧತಾ ಸಭೆ ನಡೆಸಿದ ಅವರು, ಇಂದಿನಿಂದಲೇ ರೈತರಿಂದ ದಾಖಲೆಗಳನ್ನು ಪಡೆಯಬೇಕು. ಯುದ್ಧೋಪಾದಿಯಲ್ಲಿ ಕಾರ್ಯಕೈಗೊಂಡು ಕಾಲಮಿತಿಯೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಿದರು.

ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿ ಸಾಗುವಳಿ ಭೂಮಿ ಹೊಂದಿರುವ ಎಲ್ಲ ರೈತರಿಗೆ ವಾರ್ಷಿಕ 6 ಸಾವಿರ ರೂ.ಗಳನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ.ನಂತೆ ವರ್ಷಕ್ಕೆ ಮೂರು ಕಂತಿನಲ್ಲಿ ರೈತರ ಖಾತೆಗೆ ಹಣ ಜಮೆಯಾಗಲಿದೆ. ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಪಂ ಅಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳು ಒಳಗೊಂಡಂತೆ ಗ್ರಾಮ ಹಂತದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಪ್ರತಿ ಅಧಿಕಾರಿಗಳಿಗೆ ಪ್ರತಿದಿನಕ್ಕೆ ಇಂತಿಷ್ಟು ದಾಖಲೆ ಸಂಗ್ರಹ ಹಾಗೂ ನೋಂದಣಿ ಗುರಿ ನಿಗದಿಪಡಿಸಬೇಕು. ಈ ಕುರಿತಂತೆ ತಾಲೂಕುವಾರು ಸಭೆ ನಡೆಸಿ ನೋಂದಣಿ ಪ್ರಕ್ರಿಯೆಗೆ ಅಗತ್ಯ ಕ್ರಮವಹಿಸುವಂತೆ ತಹಸೀಲ್ದಾರ್​ಗಳಿಗೆ ಸೂಚಿಸಿದರು.

ಡಿಸೆಂಬರ್ 2018ರಲ್ಲಿ ಪಿಎಂ ಕಿಸಾನ್ ಯೋಜನೆ ಘೊಷಣೆಯಾಗಿದೆ. ಇದೀಗ ಪರಿಷ್ಕರಿಸಿ ಕೃಷಿ ಸಾಗುವಳಿ ಭೂಮಿ ಹೊಂದಿದ ಸಣ್ಣ ಅತಿಸಣ್ಣ ರೈತರು ಒಳಗೊಂಡಂತೆ ಎಲ್ಲ ರೈತರಿಗೂ ಸೌಲಭ್ಯ ವಿಸ್ತರಿಸಿ ಜೂನ್​ನಲ್ಲಿ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ. ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಸಾಗುವಳಿದಾರರು ಒಳಗೊಂಡಂತೆ ಜಿಲ್ಲೆಯಲ್ಲಿ ಅಂದಾಜು 2.40 ಲಕ್ಷ ಹಿಡುವಳಿದಾರರಿದ್ದಾರೆ. ಇದರಲ್ಲಿ ಮಾಜಿ ಮತ್ತು ಹಾಲಿ ಸಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು, ಮಾಜಿ ಮತ್ತು ಹಾಲಿ ಪುರಸಭೆ, ನಗರಸಭೆ, ಜಿಪಂ ಅಧ್ಯಕ್ಷರುಗಳು, ಸಚಿವರು, ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು, ರಾಜ್ಯ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು, ಭೂಮಿ ಹೊಂದಿರುವ ಸಂಘ-ಸಂಸ್ಥೆಗಳು, ಗ್ರೂಪ್ ಡಿ ನೌಕರರನ್ನು ಹೊರತುಪಡಿಸಿ ಸಿ ಗ್ರೂಪ್ ಹಾಗೂ ಮೇಲ್ಪಟ್ಟ ಮಾಜಿ ಹಾಗೂ ಹಾಲಿ ಸರ್ಕಾರಿ ಹಾಗೂ ನಿಗಮ ಮಂಡಳಿ, ಸ್ವಾಯತ್ತ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿ ವರ್ಗ ಹಾಗೂ ನೌಕರರು ಮತ್ತು 10 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಪಿಂಚಣಿ ಪಡೆಯುತ್ತಿರುವವರು, ಕಳೆದ ಸಾಲಿನ ಆದಾಯ ತೆರಿಗೆ ಪಾವತಿದಾರರು, ವೈದ್ಯರು, ವಕೀಲರು, ಅಭಿಯಂತರರು, ಲೆಕ್ಕಪರಿಶೋಧಕರು, ವಾಸ್ತುಶಿಲ್ದಂತಹ ವೃತ್ತಿಪರರು ಸಾಗುವಳಿ ಭೂಮಿ ಹೊಂದಿರುವವರು ಈ ಯೋಜನೆ ವ್ಯಾಪ್ತಿಗೆ ಒಳಪಡುವುದಿಲ್ಲ. ಇವರನ್ನು ಹೊರತುಪಡಿಸಿದಂತೆ ಎಲ್ಲ ರೈತರಿಗೂ ಈ ಸೌಲಭ್ಯ ದೊರೆಯಲಿದೆ. ಸಾಗುವಳಿ ಭೂಮಿ ಜಂಟಿ ಮಾಲೀಕತ್ವ ಹೊಂದಿ ಪ್ರತಿಯೊ ಬ್ಬರಿಗೂ ಸಮಾನವಾಗಿ ಭೂಮಿ ಹಂಚಿಕೆಯಾದರೆ ಈ ಯೋಜನೆ ವ್ಯಾಪ್ತಿಗೆ ನೋಂದಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ರೈತರ ನೋಂದಣಿ ಕಾರ್ಯವನ್ನು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಅಟಲ್​ಜಿ ಜನಸ್ನೇಹಿ ಕೇಂದ್ರ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಾಪೂಜಿ ಸೇವಾ ಕೇಂದ್ರಗಳು, ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.

ಸಭೆಯಲ್ಲಿ ಜಿಪಂ ಸಿಇಒ ಕೆ. ಲೀಲಾವತಿ, ಅಪರ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ, ಕೃಷಿ ಜಂಟಿ ನಿರ್ದೇಶಕ ಎನ್. ಮಂಜುನಾಥ್, ತೋಟಗಾರಿಕೆ ಉಪನಿರ್ದೇಶಕ ಶರಣಪ್ಪ ಭೋಗಿ, ಕೃಷಿ ಉಪನಿರ್ದೇಶಕ ಹುಲಿರಾಜ ಹಾಗೂ ವಿವಿಧ ತಾಲೂಕಿನ ತಹಸೀಲ್ದಾರ್​ಗಳು, ತಾಪಂ ಇಒಗಳು, ಕೃಷಿ ಹಾಗೂ ತೋಟಗಾರಿಕೆ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ಅರ್ಜಿದಾರರ ಹೆಸರು, ಲಿಂಗ, ವಯಸ್ಸು, ಆಧಾರ್, ಮೊಬೈಲ್​ಸಂಖ್ಯೆ, ವಾಸ್ತವ್ಯ ವಿಳಾಸ, ವರ್ಗ, ಬ್ಯಾಂಕ್ ಖಾತೆ, ಐಎಸ್​ಎಫ್​ಸಿ ಕೋಡ್​ಗಳನ್ನು ಪಡೆಯಬೇಕು ಹಾಗೂ ಸಾಗುವಳಿ ಖಾತೆಯ ಸಂಖ್ಯೆಯೊಂದಿಗೆ ದಾಖಲಿಸಬೇಕು. ಫಲಾನುಭವಿಗಳಿಂದ ಯಾವುದೇ ಸಂವಿಧಾನಿಕ ಹುದ್ದೆ ಹೊಂದಿಲ್ಲ, ಸರ್ಕಾರಿ ಹುದ್ದೆ ಹೊಂದಿಲ್ಲ, ತೆರಿಗೆ ಪಾವತಿಸುವುದಿಲ್ಲ ಎಂಬ ಸ್ವಯಂ ಘೊಷಣೆಯ ದೃಢೀಕರಣ ಪಡೆಯಬೇಕು. ಈ ಕುರಿತಂತೆ ಮಾಹಿತಿಯನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೆ, ಕೃಷಿ ಸಹಾಯಕರಿಗೆ ಅಥವಾ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತ್ವರಿತವಾಗಿ ಒದಗಿಸಬೇಕು.

| ಕೃಷ್ಣ ಬಾಜಪೈ ಜಿಲ್ಲಾಧಿಕಾರಿ

Leave a Reply

Your email address will not be published. Required fields are marked *