ಜನರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ

ರಟ್ಟಿಹಳ್ಳಿ: ದಾಖಲಾತಿಗಳ ತಿದ್ದುಪಡಿ ಸೇರಿ ಅಗತ್ಯ ಕಾರ್ಯಗಳನ್ನು ಶೀಘ್ರ ಕೈಗೊಳ್ಳುವ ಮೂಲಕ ಗ್ರಾಮಸ್ಥರಿಗೆ ಸಮರ್ಪಕವಾಗಿ ಪಹಣಿ ಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಸೂಚಿಸಿದರು.

ತಾಲೂಕಿನ ಹುಲ್ಲತ್ತಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಸಂಜೆ ಜರುಗಿದ ಜನಸ್ಪಂದನ ಸಭೆ ಮತ್ತು ಗ್ರಾಮ ವಾಸ್ತವ್ಯ ಸಮಾರಂಭ ಉದ್ಘಾಟಿಸಿ, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ಅವರು, ಹುಲ್ಲತ್ತಿಯನ್ನು ಪೋಡಿಮುಕ್ತ ಮಾದರಿ ಗ್ರಾಮವನ್ನಾಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಗ್ರಾಮದಲ್ಲಿ ಪಶು ಆಸ್ಪತ್ರೆ ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘದ ಗೋದಾಮು ನಿರ್ವಣಕ್ಕೆ ಸ್ಥಳ ಪರಿಶೀಲಿಸಿ ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು. ಶಿಥಿಲಾವಸ್ಥೆಯಲ್ಲಿರುವ ಗ್ರಾಮದ ಶಾಲೆ ದುರಸ್ತಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.

ಸಮಸ್ಯೆಗಳನ್ನು ಬಿಚ್ಚಿಟ್ಟ ಗ್ರಾಮಸ್ಥರು: ಹುಲ್ಲತ್ತಿ ಗ್ರಾಮದಿಂದ ರಾಣೆಬೆನ್ನೂರು ಮತ್ತು ಹೊನ್ನಾಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ನೂತನ ರಟ್ಟಿಹಳ್ಳಿ ತಾಲೂಕಿನಲ್ಲಿ ಶೀಘ್ರ ಎಲ್ಲ ಕಚೇರಿಗಳನ್ನು ಆರಂಭಿಸಬೇಕು. ಜನಸ್ಪಂದನ ಸಭೆಯಲ್ಲಿ ಶಾಸಕರು ಮತ್ತು ಜನಪ್ರತಿನಿಧಿಗಳು ಹಾಜರಿರಬೇಕು. ಮೈಕೋ ಕಂಪನಿಯ ಹತ್ತಿ ಬೀಜಗಳು ಕಳಪೆಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಎಲ್ಲ ರೈತರಿಗೆ ಸಮರ್ಪಕವಾಗಿ ತಾಡಪತ್ರಿ ವಿತರಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಎದುರು ಸಮಸ್ಯೆ ಹೇಳಿಕೊಂಡರು.

ಪರಿಹಾರಕ್ಕೆ ಸೂಚನೆ: ಸಾರ್ವಜನಿಕರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ, ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ರ್ಚಚಿಸಿ 15 ದಿನದಲ್ಲಿ ಬಸ್ ಸೌಕರ್ಯ ಒದಗಿಸುವುದಾಗಿ ತಿಳಿಸಿದರು. ಮೈಕೋ ಕಂಪನಿಯ ಹತ್ತಿ ಬೀಜಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮುಂದಿನ ಜನಸ್ಪಂದನ ಸಭೆಯಲ್ಲಿ ಕಡ್ಡಾಯವಾಗಿ ಶಾಸಕರ ಅಧ್ಯಕ್ಷತೆ, ಇತರ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಭೆ ಜರುಗಿಸಲಾಗುವುದು ಎಂದು ತಿಳಿಸಿದರು. ಗ್ರಾ.ಪಂ. ಅಧ್ಯಕ್ಷ ವೀರಣಗೌಡ್ರ ಬಿದರಿ ಅಧ್ಯಕ್ಷತೆ ವಹಿಸಿದ್ದರು.

ಉಪವಿಭಾಗಾಧಿಕಾರಿ ಪಿ. ತಿಪ್ಪೇಸ್ವಾಮಿ, ತಹಸೀಲ್ದಾರ್ ಎ.ವಿ. ಶಿಗ್ಗಾಂವಿ, ವಿ.ಕೆ. ಪ್ರಸನ್ನಕುಮಾರ, ಕೆ.ಎಂ. ಮಂಜುನಾಥ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಎನ್. ತ್ಯಾಗರಾಜ, ಮನೋಹರ ದ್ಯಾಬೇರಿ, ಶಿವಕುಮಾರ ಮಲ್ಲಾಡದ, ರಾಜು ಮರಿಗೌಡ್ರ, ಜಿ.ಟಿ. ಕೀರ್ತಿಸಿಂಹ, ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ದೀವಗೀಹಳ್ಳಿ, ರಾಜಶೇಖರ ದೂದಿಹಳ್ಳಿ, ಜಗದೀಶ ಕೂಸಗೂರ, ವೀರಪ್ಪ ಬೆಳಗಾಂವಿ, ಇತರರು ಇದ್ದರು.

ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ: ಸಂಜೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಗ್ರಾಮದ ಸರ್ಕಾರಿ ಶಾಲೆಗೆ ತೆರಳಿದ ಜಿಲ್ಲಾಧಿಕಾರಿ ಡಾ. ವೆಂಕಟೇಶ, ಕೆಲ ಸಮಯ ವಿಶ್ರಾಂತಿ ಪಡೆದು, ರಾತ್ರಿ 10 ಗಂಟೆಗೆ ಗ್ರಾಮದ ನರಸಿಂಹಸ್ವಾಮಿ ದೇವಸ್ಥಾನದ ಸೇವಕ, ಎಸ್.ಟಿ. ವರ್ಗಕ್ಕೆ ಸೇರಿದ ಬಸವರಾಜ ಸ್ವಾಮೀಜಿ ಅವರ ನಿವಾಸದಲ್ಲಿ ಇತರ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಭೋಜನ ಸವಿದರು. ಗೋಧಿ ಹುಗ್ಗಿ, ರೊಟ್ಟಿ, ಚಟ್ನಿ, ಪಲ್ಯ, ಮಿರ್ಚಿ ಮತ್ತು ಅನ್ನ- ಸಾಂಬಾರ ಸವಿದರು. ನಂತರ ಶಾಲೆಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅಲ್ಲೇ ವಾಸ್ತವ್ಯ ಮಾಡಿದರು. ಬೆಳಗ್ಗೆ ಪಶು ಆಸ್ಪತ್ರೆ ಮತ್ತು ಗೋದಾಮು ನಿರ್ವಣಕ್ಕೆ ಸ್ಥಳ ಪರಿಶೀಲಿಸಿ ಹಾವೇರಿಗೆ ತೆರಳಿದರು.