ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ | ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ
ಉಡುಪಿ: ಚುನಾವಣಾ ಆಯೋಗದ ನಿರ್ದೇಶನದಂತೆ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಸುಲಲಿತವಾಗಿ ನಡೆಸಲು ಅಗತ್ಯ ಇರುವ ಎಲ್ಲ ರೀತಿಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯದ ಪೂರ್ವ ತಯಾರಿಯ ಕುರಿತ ಸಭೆಯಲ್ಲಿ ಮಾತನಾಡಿದರು.
ಬೇಡ ಗೊಂದಲಗಳಿಗೆ ಆಸ್ಪದ
ನಗರದ ಬ್ರಹ್ಮಗಿರಿಯ ಸೈಂಟ್ ಸಿಸಿಲೀಸ್ ವಿದ್ಯಾ ಸಂಸ್ಥೆಯಲ್ಲಿ ಜೂ. 4ರಂದು ಮತ ಎಣಿಕೆ ನಡೆಯಲಿದ್ದು, ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ ಕಾರ್ಯ ನಡೆಸಬೇಕು. ನಿಯೋಜನೆಗೊಂಡಿರುವ ಅಧಿಕಾರಿ ಹಾಗೂ ಸಿಬ್ಬಂದಿ ನಿಗದಿಪಡಿಸಿದ ಕಾಲಾವಧಿಯಲ್ಲಿ ಉಪಸ್ಥಿತರಿರಬೇಕು. ಅಂದು ಮುಂಜಾನೆ 5 ಗಂಟೆಗೆ ಮತ ಎಣಿಕೆ ಸಿಬ್ಬಂದಿ ಯಾವ ಕೊಠಡಿಯ ಟೇಬಲ್ನಲ್ಲಿ ಕಾರ್ಯನಿರ್ವಹಿಸಬೇಕೆಂದು ತಿಳಿಸಲಾಗುವುದು. ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ ಎಂದರು.
ಮೊಬೈಲ್ ಬಳಕೆ ನಿಷೇಧ
ಮತ ಎಣಿಕೆ ಕೇಂದ್ರಕ್ಕೆ ಅಧಿಕೃತ ಗುರುತಿನ ಚೀಟಿ ಹೊಂದಿದ ಅಧಿಕಾರಿಗಳು, ಸಿಬ್ಬಂದಿ, ಏಜೆಂಟರು ಹಾಗೂ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ. ಕೇಂದ್ರದೊಳಗೆ ಯಾರಿಗೂ ಮೊಬೈಲ್ ತರಲು ಅವಕಾಶವಿಲ್ಲ. ಮೊಬೈಲ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೊಠಡಿಯಲ್ಲಿ ಎರಡು ಟೇಬಲ್ಗೆ ಒಂದು ಸಿಸಿಟಿವಿ ಅಳವಡಿಸಬೇಕು. ಮಹಡಿ ಮೇಲಿರುವ ಕೊಠಡಿಗಳಿಗೆ ಹೋಗುವ ಮೆಟ್ಟಿಲುಗಳಿಗೆ ಸಿಸಿಟಿವಿ ಅಳವಡಿಸಲು ಚುನಾವಣಾ ಆಯೋಗ ನಿರ್ದೇಶನ ನೀಡಿದ್ದು, ಅದನ್ನು ಪಾಲಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್., ಸಹಾಯಕ ಕಮಿಷನರ್ ರಶ್ಮಿ ಎಸ್., ನಗರಸಭೆ ಪೌರಾಯುಕ್ತ ರಾಯಪ್ಪ, ಹೆಸ್ಕಾಂ ಜಿಲ್ಲಾ ಅಧೀಕ್ಷಕ ದಿನೇಶ್ ಉಪಾಧ್ಯ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಹಸೀಲ್ದಾರರು, ಉಪಸ್ಥಿತರಿದ್ದರು. ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್, ಉಡುಪಿ ಎಎಸ್ಪಿ ಡಾ. ಅರುಣಕುಮಾರ್ ಕೆ. ಇತರರು ವರ್ಚುಯಲ್ ಮೂಲಕ ಪಾಲ್ಗೊಂಡಿದ್ದರು.
ಮಾಹಿತಿ ಪಡೆಯಲು ಮಾಧ್ಯಮ ಕೇಂದ್ರ
ತಾತ್ಕಾಲಿಕ ಆರೋಗ್ಯ ಸೇವಾ ಕೇಂದ್ರ, ಪ್ರಥಮ ಚಿಕಿತ್ಸೆಗೆ ಅಗತ್ಯವಿರುವ ಔಷಧ ಹಾಗೂ ಆಂಬುಲೆನ್ಸ್ ನಿಯೋಜಿಸಬೇಕು. ನಿರಂತರ ವಿದ್ಯುತ್ ಸೌಲಭ್ಯ ಇರಬೇಕು. ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮದವರಿಗೆ ಮಾಹಿತಿ ಪಡೆಯಲು ಅನುಕೂಲವಾಗುವಂತೆ ಮಾಧ್ಯಮ ಕೇಂದ್ರ ಸ್ಥಾಪಿಸಲಾಗುವುದು. ಸುದ್ದಿ ಬಿತ್ತರಿಸಲು ಅಗತ್ಯವಿರುವ ಎಲ್ಲ ಮೂಲ ಸೌಕರ್ಯ ಕಲ್ಪಿಸಬೇಕು. ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ ಬರುವ ಅಲ್ಲಿನ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ತಂಗಲು ಕೊಠಡಿ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ವಿದ್ಯಾಕುಮಾರಿ ಸೂಚನೆ ನೀಡಿದರು.
ಅಭ್ಯರ್ಥಿಗಳು, ಏಜೆಂಟರು, ಅಧಿಕಾರಿಗಳು, ಸಿಬ್ಬಂದಿ ಕೇಂದ್ರದೊಳಗೆ ತೆರಳಲು ಪ್ರತ್ಯೇಕ ಗೇಟ್ ಮೂಲಕವೇ ಬರುವಂತೆ ಪೊಲೀಸ್ ಅಧಿಕಾರಿಗಳು ನೋಡಿಕೊಳ್ಳಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆ ಕೇಂದ್ರಕ್ಕೆ ಅಭ್ಯರ್ಥಿಪರ ಏಜೆಂಟರು ಮೊಬೈಲ್ ಕೊಂಡೊಯ್ದಿದ್ದರು. ಈ ಬಾರಿ ಹಾಗಾಗದಂತೆ ಎಚ್ಚರಿಕೆ ವಹಿಸಬೇಕು.
ಡಾ.ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ, ಉಡುಪಿ