ಜಂಟಿ ಸರ್ವೆ ಪೂರ್ಣಗೊಂಡ ನಂತರ ಕಂದಾಯ ಭೂಮಿ ಅರ್ಜಿದಾರರಿಗೆ ಹಂಚಿಕೆ

ಚಿಕ್ಕಮಗಳೂರು: ಜಂಟಿ ಸರ್ವೆ ಶೀಘ್ರ ಪೂರ್ಣಗೊಳಿಸಿ ಕಂದಾಯ ಇಲಾಖೆ ಸುಪರ್ದಿಗೆ ಬರುವ ಜಾಗವನ್ನು ಅಕ್ರಮ-ಸಕ್ರಮದಡಿ ಅರ್ಜಿ ಸಲ್ಲಿಸಿದವರಿಗೆ ವಿತರಿಸುವುದು ಹಾಗೂ ಸಿ ಆಂಡ್ ಡಿ ಭೂಮಿಯನ್ನು ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಟ್ಟು ಉಳಿದ ಜಾಗ ಅರಣ್ಯ ಇಲಾಖೆ ನೋಟಿಫೈ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ಸೋಮವಾರ ನಡೆದ ಜಿಪಂ ತ್ರೖೆಮಾಸಿಕ ಕೆಡಿಪಿ ಸಭೆಯಲ್ಲಿ ನಿರ್ಧರಿಸಲಾಯಿತು.

ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಜಂಟಿ ಸರ್ವೆಯಿಂದ ಅರಣ್ಯ ಮತ್ತು ಕಂದಾಯ ಭೂಮಿ ಯಾವುದೆಂಬ ಗೊಂದಲ ಪರಿಹಾರವಾಗಲಿದೆ. ಇದರಲ್ಲಿ ಕಂದಾಯ ಇಲಾಖೆಗೆ ಬರುವ ಜಾಗವನ್ನು ಅಕ್ರಮ-ಸಕ್ರಮದಡಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ನಿಯಮಾನುಸಾರ ಹಂಚಿಕೆಗೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಸಿ.ಟಿ.ರವಿ, ಜಂಟಿ ಸರ್ವೆ ಕಾರ್ಯ ಪ್ರಗತಿ ಎಷ್ಟಾಗಿದೆ ಎಂದು ಪ್ರಶ್ನಿಸಿದರು. ಅಲ್ಲದೆ ಅರಣ್ಯೇತರ ನೋಟಿಫೈ ಭೂಮಿಯನ್ನು ಡಿನೋಟಿಫೈ ಮಾಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಜಂಟಿ ಸರ್ವೆ ಮಾಡುವುದರ ಮೂಲ ಉದ್ದೇಶವೇನು? ಅರಣ್ಯ ಮತ್ತು ಕಂದಾಯ ಇಲಾಖೆ ನಡುವೆ ಗುರಿ ಇತ್ಯರ್ಥಪಡಿಸುವುದಲ್ಲವೇ. ಸವೇೕ ನಂತರ ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಜಾಗವನ್ನು 94ಸಿ, 94ಸಿಸಿಯಡಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ವಿತರಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಮಾತನಾಡಿ, ಜಿಲ್ಲೆಯಲ್ಲಿ 1.07 ಲಕ್ಷ ಹೆಕ್ಟೇರ್ ಭೂಮಿಯನ್ನು ಕ್ಷೇತ್ರ ಮಟ್ಟದಲ್ಲಿ ಮ್ಯುಟೇಶನ್ ದಾಖಲೆ ಪರಿಶೀಲಿಸಿ ಜಂಟಿ ಸರ್ವೆ ಮಾಡುತ್ತಿದ್ದು, ಇನ್ನೊಂದು ವಾರದಲ್ಲಿ ಪೂರ್ಣಗೊಳ್ಳಲಿದೆ. ಒಂದೇ ಸರ್ವೆ ನಂಬರ್​ನ ಭೂಮಿ ಅರಣ್ಯ ಮತ್ತು ಕಂದಾಯ ಎರಡೂ ಪಹಣಿಯಲ್ಲಿದೆ. ಇದನ್ನು ಜಂಟಿ ಸರ್ವೆ ನಂತರ ಪ್ರತ್ಯೇಕಗೊಳಿಸಲಾಗುವುದು. ಇದರಿಂದ ಅಂದಾಜು 52 ಸಾವಿರ ಹೆಕ್ಟೇರ್ ಭೂಮಿ ಕಂದಾಯ ಸುಪರ್ದಿಗೆ ಬರಲಿದೆ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಸೆಕ್ಷನ್-4 ಪ್ರಸ್ತಾವಿತ ಅರಣ್ಯ ಪ್ರದೇಶ ಮತ್ತು ಸಿ ಆಂಡ್ ಡಿ ಭೂಮಿಯನ್ನು ಗ್ರಾಮೀಣ ಕುಟುಂಬಗಳ ನಿವೇಶನಕ್ಕಾಗಿ ಮೀಸಲಿಡಬೇಕು. ಆಟದ ಮೈದಾನ, ಸ್ಮಶಾನ, ನಿವೇಶನ, ಸಮುದಾಯ ಭವನ ನಿರ್ವಣಕ್ಕೆ ಭೂಮಿ ಮೀಸಲಿಟ್ಟು ಉಳಿದ ಜಾಗವನ್ನು ಪ್ರಸ್ತಾವಿತ ಅರಣ್ಯಕ್ಕೆ ಅಧಿಕಾರಿಗಳು ಅನುಮತಿ ನೀಡಬೇಕೆಂದು ಕೋರಿದರು.

ಪ್ರಸ್ತಾವಿತ ಅರಣ್ಯಕ್ಕಾಗಿ ನೀಡಿದ ಜಾಗದಲ್ಲಿ ಸಾರ್ವಜನಿಕ ಉದ್ದೇಶಗಳಿಗೆ ಜಾಗ ಮೀಸಲಿಟ್ಟ ನಂತರವೇ ಉಳಿದ ಜಾಗವನ್ನು ಮಾತ್ರ ಕಂದಾಯ ಇಲಾಖೆ ಅರಣ್ಯ ಇಲಾಖೆಗೆ ವಹಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ನಿರಾಶ್ರಿತರಿಗೆ ಮೊದಲ ಆದ್ಯತೆ: ಜಿಲ್ಲೆಯ ಕುದುರೆಮುಖ, ಮಸಗಲಿ, ಸಾರಗೋಡು ನಿರಾಶ್ರಿತರಿಗೆ ಪುನರ್ವಸತಿಗಾಗಿ ಕಂದಾಯ ಭೂಮಿ ಕೊಟ್ಟ ನಂತರವೇ ಹುಬ್ಬಳ್ಳಿ-ಅಂಕೋಲಾ ರೈಲ್ವೆಗೆ ಸ್ವಾಧೀನಪಡಿಸಿಕೊಂಡ ಅರಣ್ಯಭೂಮಿ ಬದಲಿಗೆ ಪರ್ಯಾಯ ಭೂಮಿ ನೀಡಬೇಕೆಂದು ಕೆಡಿಪಿ ಸಭೆ ನಿರ್ಧರಿಸಿತು. ವಿಷಯ ಪ್ರಸ್ತಾಪಿಸಿದ ಶಾಸಕ ರವಿ, ಮಸಗಲಿ, ಕುದುರೆಮುಖ, ಸಾರಗೋಡು ಸಂತ್ರಸ್ತರಿಗೆ 20 ವರ್ಷವಾದರೂ ಪುನರ್ವಸತಿ ಕಲ್ಪಿಸಿಲ್ಲ. ಆದರೆ ಹೊರ ಜಿಲ್ಲೆಯ ರೈಲ್ವೆ ಯೋಜನೆಗೆ ಇಲ್ಲಿನ ಕುದುರೆಮುಖದ 1,657 ಎಕರೆ, 36 ಗುಂಟೆ ಜಾಗ ನೀಡುವುದು ಎಷ್ಟು ಸಮಂಜಸ? ಎಂದು ಖಾರವಾಗಿ ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಜಿಲ್ಲೆಯ ಜನರಿಗೆ ಮೊದಲು ನ್ಯಾಯ ಸಿಗುವವರೆಗೂ ಅಂಕೋಲಾ ರೈಲ್ವೆಗೆ ಜಾಗ ನೀಡುವ ಆದೇಶ ತಡೆ ಹಿಡಿಯಬೇಕೆಂದು ಒತ್ತಾಯಿಸಿದರು. ಇದಕ್ಕೆ ಒಪ್ಪಿದ ಜಿಲ್ಲಾ ಉಸ್ತುವಾರಿ ಸಚಿವರು, ಇಲ್ಲಿನ ಸಂತ್ರಸ್ತರ ಪುನರ್ವಸತಿಗಾಗಿ ಜಾಗ ಮೀಸಲಿಟ್ಟ ನಂತರವೇ ಅಂಕೋಲಾ ರೈಲ್ವೆಗೆ ಬದಲಿ ಜಾಗ ನೀಡೋಣ. ಅಲ್ಲಿವರೆಗೆ ಈ ಆದೇಶವನ್ನು ತಡೆಹಿಡಿಯಿರಿ ಎಂದು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.

Leave a Reply

Your email address will not be published. Required fields are marked *