ಬೆಂಗಳೂರು: ಕಂದಾಯ ನ್ಯಾಯಾಲಯಗಳು ಹೊರಡಿಸಿದ ಆದೇಶದಲ್ಲಿ ಕಣ್ತಪ್ಪಿನಿಂದ ಲೋಪವಾಗಿದ್ದಲ್ಲಿ ಪುನರ್ ಪರಿಶೀಲನೆ ಅವಕಾಶವನ್ನು ಜಿಲ್ಲಾಧಿಕಾರಿ, ವಿಶೇಷ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ತಹಸೀಲ್ದಾರ್‌ಗಳಿಗೆ ನೀಡುವ ಮಹತ್ವದ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ಹಾಗೆಯೇ ಕುಮ್ಕಿ, ಬಾಣೆ ಹಕ್ಕು ಚಲಾಯಿಸಲು ಜಮೀನು ಪಕ್ಕದಲ್ಲೇ ಭೂಮಿ ಇದ್ದರೆ ಕಾನೂನಿನಲ್ಲಿ ಅವಕಾಶ ನೀಡಲು ನಿರ್ಧರಿಸಲಾಗಿದೆ.
ಬುಧವಾರ ವಿಧಾನಸಭೆಯಲ್ಲಿ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ-2025 ಪರ್ಯಾಲೋಚನೆ ಪ್ರಕ್ರಿಯೆ ನಡೆದು ಅಂಗೀಕಾರಗೊಂಡಿತು. ಈ ವೇಳೆ ವಿಧೇಯಕದ ಕುರಿತು ಮಾಹಿತಿ ಹಂಚಿಕೊಂಡ ಕಂದಾಯ ಸಚಿವ ಕೃಷ್ಣಬೈರೇಗೌಡ, ಭೂ ಕಂದಾಯ (ತಿದ್ದುಪಡಿ) ಸೆಕ್ಷನ್ 25ಕ್ಕೆ ತಿದ್ದುಪಡಿ ತರಲಾಗಿದೆ. ಕಂದಾಯ ಇಲಾಖೆಯಲ್ಲಿ ಡಿಸಿ, ಎಡಿಸಿ, ಎಸಿ ಮತ್ತು ತಹಸೀಲ್ದಾರ್ ಕೋರ್ಟ್‌ಗಳು ನಡೆಯುತ್ತಿವೆ. ಇಲ್ಲಿ ಕಣ್ತಪ್ಪಿನಿಂದ ಅಥವಾ ಕಾಯ್ದೆ ಪಾಲಿಸದೆ ಆದೇಶ ಮಾಡಿದರೆ ಅಂತಹ ಸಂದರ್ಭದಲ್ಲಿ ಮುಂದಿನ ಕೋರ್ಟ್‌ಗೆ ಹೋಗಬೇಕಿದೆ. ಇದನ್ನು ತಪ್ಪಿಸಲು ಕಾನೂನು ತಿದ್ದುಪಡಿ ಮಾಡಲಾಗುತ್ತಿದೆ ಎಂದರು.
ತಹಸೀಲ್ದಾರ್ ಮಾಡಿದ ತಪ್ಪು ಆದೇಶ ತಿದ್ದುಪಡಿಗೆ ಉಪ ವಿಭಾಗಾಧಿಕಾರಿ ಬಳಿಗೆ, ಎಸಿ ಮಾಡಿದ ತಪ್ಪಿಗೆ ಡಿಸಿ ಬಳಿಗೆ ಮೇಲ್ಮನವಿ ಸಲ್ಲಿಸಬೇಕಿದೆ. ಇದರಿಂದ ಕೋರ್ಟ್ ಸಮಯ ವ್ಯಯ ಮತ್ತು ಬಾಧಿತರಿಗೂ ತೊಂದರೆ ಆಗುತ್ತಿದೆ. ಆದ್ದರಿಂದ ಕಣ್ತಪ್ಪಿನಿಂದ ಅಥವಾ ಕಾಯ್ದೆ ಪಾಲಿಸದೆ ತಪ್ಪು ಆದೇಶ ಮಾಡಿದರೆ ಹಾಗೂ ಹಿರಿಯ ಅಧಿಕಾರಿಗಳ ತಪ್ಪನ್ನು ಗುರುತಿಸಿದರೆ ಅಂತಹ ವೇಳೆ ಆದೇಶವನ್ನು ನಿಗದಿತ ಸಮಯದಲ್ಲಿ ಪುನರ್ ಪರಿಶೀಲನೆಗೆ ಅವಕಾಶ ಕೊಟ್ಟು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದರು.