ಮುಂಬೈ: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಇಜಾಜ್ ಲಕಡ್ವಾಲಾ ಬಿಹಾರದ ಪಟನಾದಲ್ಲಿ ಮುಂಬೈ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಳೆದ 20 ವರ್ಷಗಳಿಂದ ಇಜಾಜ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ.
ಮುಂಬೈ ಪೊಲೀಸರು ಪಟನಾದಲ್ಲಿ ಬುಧವಾರ ರಾತ್ರಿ 10.30ಕ್ಕೆ ಕಾರ್ಯಾಚರಣೆ ನಡೆಸಿದ್ದು, ಗ್ಯಾಂಗ್ಸ್ಟರ್ ಇಜಾಜ್ ಸುಲಭವಾಗಿ ಪೊಲೀಸರಿಗೆ ಶರಣಾಗಿದ್ದಾನೆ. ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿರುವ ಇಜಾಜ್ನ ಪುತ್ರಿ ನೀಡಿರುವ ಸುಳಿವು ಆಧರಿಸಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು. ಕೋರ್ಟ್ ಈತನನ್ನು ಜನವರಿ 21ರ ತನಕ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಪರಾಧ ವಿಭಾಗದ ಜಾಯಿಂಟ್ ಕಮನಿಷನರ್ ಆಫ್ ಪೊಲೀಸ್ ಸಂತೋಷ್ ರಸ್ತೋಗಿ, ಇಜಾಜ್ ಪುತ್ರಿ ಸೋನಿಯಾ ಲಕಡ್ವಾಲಾ ನಮ್ಮ ಕಸ್ಟಡಿಯಲ್ಲಿದ್ದಾಳೆ. ಆಕೆ ನೀಡಿದ ಮಾಹಿತಿ ಮತ್ತು ಪಟನಾದಲ್ಲಿರುವ ನಮ್ಮ ಮೂಲಗಳು ಆತನ ಇರುವಿಕೆಯನ್ನು ದೃಢಪಡಿಸಿದ ಕಾರಣ ಈ ಕಾರ್ಯಾಚರಣೆ ನಡೆಸಲಾಗಿತ್ತು. ಜಟ್ಟಾನ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಜಾಜನ್ನು ಬಂಧಿಸಲಾಗಿದೆ.
ಕೊಲೆ, ರಾನ್ಸಮ್, ಭಾರತ ವಿರೋಧಿ ಚಟುವಟಿಕೆಗಳಲ್ಲಿ ಇಜಾಜ್ ಭಾಗಿಯಾಗಿದ್ದಾನೆ. ಅಲ್ಲದೆ, ನಕಲಿ ದಾಖಲೆ, ಪಾಸ್ಪೋರ್ಟ್ ಬಳಸಿಕೊಂಡು ಪಾಕಿಸ್ತಾನಕ್ಕೆ ಅನೇಕ ಬಾರಿ ಹೋಗಿ ಬಂದಿದ್ದಾನೆ. ಈತ ಭೂಗತ ಪಾತಕಿ ಛೋಟಾ ರಾಜನ್ ಜತೆಗೂ ಕೆಲಸ ಮಾಡಿದ್ದು, ದಾವೂದ್ ಇಬ್ರಾಹಿಂನ ಆಪ್ತರಲ್ಲಿ ಒಬ್ಬ.
ಇಜಾಜ್ ಪುತ್ರಿ ಸೋನಿಯಾಳನ್ನು ಪೊಲೀಸರು ಕಳೆದ ತಿಂಗಳು ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಆಕೆ ತನ್ನ ಪುತ್ರಿಯೊಂದಿಗೆ ಫೇಕ್ ಪಾಸ್ಪೋರ್ಟ್ ಬಳಸಿ ವಿದೇಶಕ್ಕೆ ತೆರಳಲು ಯತ್ನಿಸಿದ್ದಳು. (ಏಜೆನ್ಸೀಸ್)
Gangster Ejaz Lakdawala arrested from Patna by Mumbai Police's anti extortion cell, remanded to police custody till January 21 by Court pic.twitter.com/t0TSCHu9gw
— ANI (@ANI) January 9, 2020
Joint CP Crime, Santosh Rastogi on arrest of gangster Ejaz Lakadwala: His daughter was in our custody. She gave a lot of information to us. Our sources also told us about his arrival in Patna,he was arrested in Jattanpur police station limits https://t.co/KHVuAUwTDv pic.twitter.com/jiHsBznV2Y
— ANI (@ANI) January 9, 2020