ಡಿ ಕಂಪನಿ ಟಾರ್ಗೆಟ್: ವಿಶ್ವಸಂಸ್ಥೆಯಲ್ಲಿ ದಾವೂದ್ ಬಗ್ಗೆ ಭಾರತ ಪ್ರಸ್ತಾಪ

ನ್ಯೂಯಾರ್ಕ್: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ ಎಂದು ಅಮೆರಿಕ ಹೇಳಿರುವ ಬೆನ್ನಲ್ಲೇ, ವಿಶ್ವಸಂಸ್ಥೆಯಲ್ಲಿ ಆತನ ಬಗ್ಗೆ ಭಾರತ ಪ್ರಸ್ತಾಪಿಸಿದೆ. ಭೂಗತ ಪಾತಕಕ್ಕಾಗಿ ಗುರುತಿಸಿಕೊಂಡಿದ್ದ ದಾವೂದ್​ನ ಡಿ ಕಂಪನಿ ಈಗ ಅಂತಾರಾಷ್ಟ್ರೀಯ ಮಟ್ಟದ ಉಗ್ರ ಜಾಲವಾಗಿ ಬೆಳೆದಿದ್ದು, ವಿಶ್ವಸಂಸ್ಥೆ ಭದ್ರತಾ ಮಂಡಳಿ ಇದರ ಮೇಲೆ ನಿಗಾ ಇಡಬೇಕು. ಡಿ ಕಂಪನಿ, ಜೈಷ್ ಎ ಮೊಹಮ್ಮದ್ ಮತ್ತು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಗಳಿಂದ ಎದುರಾಗಬಹುದಾದ ಅಪಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಭಾರತ ಒತ್ತಾಯಿಸಿದೆ.

‘ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗಿರುವ ಸಮಸ್ಯೆಗಳು: ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳು ಮತ್ತು ಪಾತಕರ ಗುಂಪಿನ ನಡುವಿನ ಸಂಬಂಧ’ ಎನ್ನುವ ವಿಷಯದ ಮೇಲೆ ವಿಶ್ವಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ವಿಶ್ವಸಂಸ್ಥೆ ಭಾರತೀಯ ರಾಯಭಾರಿ ಸಯ್ಯದ್ ಅಕ್ಬರುದ್ದೀನ್, ದಾವೂದ್​ನ ಡಿ ಕಂಪನಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಡಿ ಕಂಪನಿಯನ್ನು ಉಗ್ರ ಸಂಘಟನೆ ಎಂದೇ ಗುರುತಿಸಬೇಕು. ಮಾದಕ ವಸ್ತು, ಮಾನವ ಕಳ್ಳಸಾಗಣೆ, ಅಪಹರಣದ ಮೂಲಕ ಇವರು ಹಣ ಸಂಗ್ರಹ ಮಾಡುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಸಂಸ್ಥೆಗಳು ಇವರ ಜತೆ ಕೈಜೋಡಿಸಿವೆ. ಅಕ್ರಮವಾಗಿ ಹಣಕಾಸು ಒದಗಿಸುವುದು, ಶಸ್ತ್ರಾಸ್ತ್ರ ಅಕ್ರಮ, ಮಾದಕ ದ್ರವ್ಯಗಳ ಸಾಗಣೆ, ಉಗ್ರರನ್ನು ಒಂದು ಗಡಿಯಿಂದ ಇನ್ನೊಂದು ಗಡಿಗೆ ಸಾಗಿಸುವುದು ಮುಂತಾದ ಕಾರ್ಯದಲ್ಲಿ ತೊಡಗಿಸಿಕೊಂಡಿವೆ ಎಂದು ಅಕ್ಬರುದ್ದೀನ್ ಹೇಳಿದ್ದಾರೆ. ಭಾರತೀಯ ಮೂಲದವನಾದ ದಾವೂದ್, ಚಿನ್ನ ಕಳ್ಳಸಾಗಾಣಿಕೆ, ನಕಲಿ ನೋಟು ಮುದ್ರಣ, ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯಗಳ ಅಕ್ರಮ ಸಾಗಣೆಯನ್ನು ಪಾಕಿಸ್ತಾನದಿಂದಲೇ ನಡೆಸುತ್ತಿದ್ದಾನೆ. ಆದರೆ ಆತನ ಇರುವಿಕೆ ಬಗ್ಗೆ ತಿಳಿದೂ ಪಾಕಿಸ್ತಾನ ಇದನ್ನು ನಿರಾಕರಿಸುತ್ತಿರುವುದು ಆತಂಕದ ವಿಚಾರ ಎಂದಿದ್ದಾರೆ.

ಪಾಕ್​ನಲ್ಲಿದ್ದಾನೆ ದಾವೂದ್

ದಾವೂದ್​ನ ಬಲಗೈ ಬಂಟರಲ್ಲಿ ಒಬ್ಬನಾಗಿ ಗುರುತಿಸಿಕೊಂಡಿರುವ ಜಾಬಿರ್ ಮೋತಿವಾಲಾನನ್ನು ಅಮೆರಿಕಕ್ಕೆ ಗಡಿಪಾರು ಮಾಡುವ ಸಲುವಾಗಿ ಬ್ರಿಟನ್ ಕೋರ್ಟ್​ನಲ್ಲಿ ನಡೆಯುತ್ತಿರುವ ವಿಚಾರಣೆ ವೇಳೆ ಅಮೆರಿಕ ಮಹತ್ವದ ಮಾಹಿತಿ ನೀಡಿತ್ತು. ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾನೆ. ಅಲ್ಲಿಂದಲೇ ಜಾಗತಿಕ ಮಟ್ಟದ ಕ್ರಿಮಿನಲ್ ಕೃತ್ಯಗಳನ್ನು ನಿಯಂತ್ರಿಸುತ್ತಾನೆಂದು ಹೇಳಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಾಕ್ ವಿದೇಶಾಂಗ ಸಚಿವಾಲಯ, ದಾವೂದ್ ಪಾಕಿಸ್ತಾನದಲ್ಲಿ ಇಲ್ಲ ಎಂದು ಹೇಳಿತ್ತು.

ಕೇಂದ್ರೀಕೃತ ದಾಳಿ ಅಗತ್ಯ

ವಿಶ್ವಸಂಸ್ಥೆ ಮತ್ತು ಇತರ ರಾಷ್ಟ್ರಗಳು ಜತೆಯಾಗಿ ದಾಳಿಗೆ ಮುಂದಾದರೆ ಯಾವುದೇ ಉಗ್ರಸಂಘಟನೆಯನ್ನು ಮಟ್ಟಹಾಕಲು ಸಾಧ್ಯ ಎನ್ನುವುದಕ್ಕೆ ಐಸಿಸ್ ಉತ್ತಮ ಉದಾಹರಣೆ. ಕೇಂದ್ರೀಕೃತ ದಾಳಿಯಿಂದ ಇದು ಸಾಧ್ಯವಾಗಲಿದೆ. ದಾವೂದ್ ಇಬ್ರಾಹಿಂ, ಡಿ ಕಂಪನಿ, ಜೈಷ್ ಎ ಮೊಹಮ್ಮದ್, ಲಷ್ಕರ್ ಎ ತೊಯ್ಬಾ ಮುಂತಾದ ಉಗ್ರಸಂಘಟನೆಗಳ ವಿರುದ್ಧ ಇಂತಹದ್ದೇ ದಾಳಿ ನಡೆಸಿ ಇದನ್ನು ಮಟ್ಟ ಹಾಕುವ ಅಗತ್ಯವಿದೆ ಎಂದಿದ್ದಾರೆ.

ಮಸೂದ್ ಬಳಿಕ ಡಿ ಕಂಪನಿ?

ಭಾರತ ನಡೆಸಿದ ಸತತ ಪ್ರಯತ್ನದ ಫಲವಾಗಿ ಉಗ್ರ ಮಸೂದ್ ಅಜರ್​ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿತ್ತು. ಇದೀಗ ದಾವೂದ್ ಇಬ್ರಾಹಿಂ ಮತ್ತು ಡಿ ಕಂಪನಿಯನ್ನು ಭಾರತ ಟಾರ್ಗೆಟ್ ಮಾಡಿದ್ದು, ಇದನ್ನು ಮಟ್ಟ ಹಾಕಲು ಪ್ರಯತ್ನ ಆರಂಭಿಸಿದೆ.

ಅಂದ್ರಾಬಿ ಆಸ್ತಿ ಜಪ್ತಿ

ದುಖ್ತರಾನ್ ಎ ಮಿಲ್ಲನ್​ನ ಮುಖ್ಯಸ್ಥೆ ಅಸಿಯಾ ಅಂದ್ರಾಬಿಯ ಆಸ್ತಿಯನ್ನು ಎನ್​ಐಎ ಜಫ್ತಿ ಮಾಡಿದೆ. ಶ್ರೀನಗರದ ಸೌರಾದಲ್ಲಿರುವ ಅಂದ್ರಾಬಿ ನಿವಾಸವನ್ನು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾನೂನಿನಡಿಯಲ್ಲಿ ಜಫ್ತಿ ಮಾಡಲಾಗಿದೆ. ಅಂದ್ರಾಬಿ ಭಾರತದ ವಿರುದ್ಧದ ಭಾಷಣಗಳಿಂದಲೇ ಖ್ಯಾತಿ ಪಡೆದಿದ್ದು, 2018ರ ಜುಲೈನಲ್ಲಿ ಅಂದ್ರಾಬಿ, ಆಕೆಯ ಇಬ್ಬರು ಸಹಯೋಗಿಗಳಾದ ನಾಹಿದಾ ನಸ್ರೀನ್ ಮತ್ತು ಸೋಫಿ ಫಹಮಿದಾರನ್ನು ಬಂಧಿಸಲಾಗಿತ್ತು.

ಹಣಕಾಸು ಕ್ರಿಯಾ ಕಾರ್ಯಪಡೆಗೆ ಶ್ಲಾಘನೆ

ಹಣಕಾಸು ಕ್ರಿಯಾ ಕಾರ್ಯಪಡೆ (ಫೇಟ್) ಮಾಡುತ್ತಿರುವ ಕಾರ್ಯವನ್ನು ಅಕ್ಬರುದ್ದೀನ್ ಶ್ಲಾಘಿಸಿದ್ದು, ವಿಶ್ವಸಂಸ್ಥೆ ಇದರೊಂದಿಗೆ ಕೈಜೋಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಇದು ಹಣ ವಂಚನೆ ಮತ್ತು ಉಗ್ರರಿಗೆ ಹಣ ಸಂದಾಯ ಮಾಡುವುದನ್ನು ತಡೆಯುವ ಸಲುವಾಗಿ ಕಾರ್ಯನಿರ್ವಹಿಸುವ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ.

ಅಲ್​ಕೈದಾ ಬೆದರಿಕೆ

ಜಮ್ಮು- ಕಾಶ್ಮೀರದಲ್ಲಿ ಭಾರತೀಯ ಸೇನೆ ಮತ್ತು ಸರ್ಕಾರಕ್ಕೆ ಅನಿರೀಕ್ಷಿತ, ಅನಿಯಮಿತ ಹೊಡೆತಗಳನ್ನು ನೀಡಲಾಗುವುದೆಂದು ಅಲ್​ಕೈದಾ ಎಚ್ಚರಿಸಿದೆ. ‘ಡೋಂಟ್ ಫರ್​ಗೆಟ್ ಕಾಶ್ಮೀರ’ ಎನ್ನುವ ಶೀರ್ಷಿಕೆಯಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಉಗ್ರ ಸಂಘಟನೆ ಮುಖ್ಯಸ್ಥ ಐಮಾನ್ ಅಲ್ ಜವಾಹಿರಿ, ಜಮ್ಮು- ಕಾಶ್ಮೀರದಲ್ಲಿ ಭಾರತೀಯ ಸೇನೆ ಮತ್ತು ಸರ್ಕಾರದ ಮೇಲೆ ದಾಳಿ ನಡೆಸಿ ಅಲ್ಲಿನ ಆರ್ಥಿಕತೆಯನ್ನು ಅಲುಗಾಡಿಸುವುದು, ಮಾನವ ಬಲವನ್ನು ಕಳೆದುಕೊಳ್ಳುವಂತೆ ಮಾಡುವುದು ತಮ್ಮ ಮುಖ್ಯ ಉದ್ದೇಶ ಎಂದಿದ್ದಾನೆ. ಇದರ ಜತೆಗೆ ಉಗ್ರ ಚಟುವಟಿಕೆಗಳಿಗೆ ಪಾಕಿಸ್ತಾನದ ನೆರವನ್ನೂ ಆತ ಸ್ಮರಿಸಿಕೊಂಡಿದ್ದಾನೆ.

Leave a Reply

Your email address will not be published. Required fields are marked *