ಪಟನಾ: ಮುಂಬೈ ಸರಣಿ ಸ್ಪೋಟದ ಸಂಚುಕೋರ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲೇ ಇದ್ದಾನೆ ಎಂದು ಆತನ ಸಹಚರ ಇಜಾಜ್ ಲಕಡಾವಾಲಾ (40) ಖಚಿತ ಪಡಿಸಿದ್ದಾನೆ.
ದಾವೂದ್ ಕರಾಚಿಯಲ್ಲಿ ರಕ್ಷಣಾ ವಸತಿ ಪ್ರದೇಶದಲ್ಲೇ ಇದ್ದಾನೆ ಎಂದಿರುವ ಲಕಡಾವಾಲಾ, ಅದರ ವಿಳಾಸ 6ಎ, ಖಯಾಬನ್ ತಾಂಜಿಮ್ 5ನೇ ಘಟ್ಟ, ಡಿಫೆನ್ಸ್ ಹೌಸಿಂಗ್ ಏರಿಯಾ ಎಂದೂ ಮಾಹಿತಿ ನೀಡಿದ್ದಾನೆ. ದಾವೂದ್ನ ಇನ್ನೊಂದು ಮನೆಯ ವಿಳಾಸ ಡಿ-13, 4ನೇ ಬ್ಲಾಕ್, ಕ್ಲಿಫ್ಟನ್, ಕರಾಚಿ ಎಂದು ಮುಂಬೈ ಕ್ರೖೆಂ ವಿಭಾಗದ ಸುಲಿಗೆ ನಿಗ್ರಹ ದಳದ ಪೊಲೀಸರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಐಎಸ್ಐ ಸುರಕ್ಷಿತ ಆಶ್ರಯದಲ್ಲಿರುವ ದಾವೂದ್ಗೆ
ಅತ್ಯುತ್ತಮ ಕಮಾಂಡೊಗಳ ಭದ್ರತೆ ಕಲ್ಪಿಸಲಾಗಿದೆ. ಪಾಕ್ನ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರಿಗೂ ಈ ಬಗ್ಗೆ ಗೊತ್ತಿದೆ ಎಂದೂ ಆತ ಹೇಳಿದ್ದಾನೆ.
ಐಎಸ್ಐ ಆಶ್ರಯ: ದಾವೂದ್ನ ಆಪ್ತರಾದ ಅನೀಸ್, ಛೋಟಾ ಶಕೀಲ್ ಮತ್ತಿತರರಿಗೆ ಪಾಕ್ ಗುಪ್ತಚರ ದಳ ಐಎಸ್ಐ ಸುರಕ್ಷಿತ ಆಶ್ರಯ ಕಲ್ಪಿಸಿದೆ ಎಂದು ಲಕಡಾವಾಲಾ ಮಾಹಿತಿ ನೀಡಿದ್ದಾನೆ. ಲಕಡಾವಾಲಾ ಪಟನಾಗೆ ಬರುತ್ತಿದ್ದಾನೆ ಎಂದು ಆತನ ಮಗಳು ಸೋನಿಯಾ ನೀಡಿದ್ದ ಮಾಹಿತಿ ಆಧರಿಸಿ ಮುಂಬೈ ಪೊಲೀಸರು ಜ. 9ರಂದು ಆತನನ್ನು ಬಂಧಿಸಿದ್ದರು. ನಂತರ ಆತನನ್ನು ಮುಂಬೈಗೆ ಕರೆತರಲಾಯಿತು. ಕೋರ್ಟ್ ಆತನನ್ನು ಜ. 21ರವರೆಗೆ ಪೊಲೀಸ್ ವಶಕ್ಕೆ ನೀಡಿದೆ.
ಬ್ಯಾಂಕಾಕ್ನಲ್ಲಿ ದಾಳಿಗೊಳಗಾಗಿದ್ದ
ದಾವೂದ್ನಿಂದ ಬೇರೆಯಾದ ಛೋಟಾ ರಾಜನ್ ಜತೆ ಕೆಲ ಕಾಲ ಇದ್ದ ಇಜಾಜ್ ಲಕಡಾವಾಲಾ, ನಂತರ ಮತ್ತೆ ದಾವೂದ್ ಗುಂಪಿಗೆ ಸೇರಿದ್ದ. ಥಾಯ್ಲೆಂಡ್ನ ಬ್ಯಾಂಕಾಕ್ನಲ್ಲಿ 2002ರಲ್ಲಿ ದಾವೂದ್ ಗುಂಪಿನ ಮೇಲೆ ಛೋಟಾ ರಾಜನ್ ಗುಂಪು ದಾಳಿ ನಡೆಸಿದಾಗ ಲಕಡಾವಾಲಾ ಕೂಡ ಗಂಭೀರವಾಗಿ ಗಾಯಗೊಂಡಿದ್ದ. ಏಳು ಗುಂಡುಗಳು ದೇಹ ಹೊಕ್ಕಿದ್ದವು. ಅದೃಷ್ಟವಶಾತ್ ಬದುಕುಳಿದ. ಈ ಘಟನೆಯ ತರುವಾಯ ಲಕಡಾವಾಲಾ ದಕ್ಷಿಣ ಆಫ್ರಿಕಾಕ್ಕೆ ಪರಾರಿಯಾಗಿದ್ದ. 2008ರಲ್ಲಿ ತನ್ನದೇ ಪ್ರತ್ಯೇಕ ಗುಂಪು ಕಟ್ಟಿಕೊಂಡ ಲಕಡಾವಾಲಾ, ಹಣ ಸುಲಿಗೆ, ಕೊಲೆ ಯತ್ನ, ಗಲಭೆಗಳನ್ನು ನಡೆಸುತ್ತಿದ್ದ. ಅನೇಕ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಲಕಡಾವಾಲಾನನ್ನು 2004ರಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ನಂತರ ವಿದೇಶಕ್ಕೆ ಪರಾರಿಯಾಗಿದ್ದ ಆತ, ಕೆನಡಾದ ಒಟ್ಟಾವಾದಲ್ಲಿ ಕೆಲವು ಕಾಲ ಸೆರೆಯಲ್ಲಿದ್ದ.