ಬಾನ ಮುಡಿಗೆ ಮಂಜಿನ ಮೊಗ್ಗುಗಳು..!

ಡಿ.ಎಂ.ಮಹೇಶ್ ದಾವಣಗೆರೆ: ಅಬ್ಬಬ್ಬಾ.. ಇದೆಂಥ ಇಬ್ಬನೀರಿ. ಜೀವನದಲ್ಲೇ ಇಂತಹ ಮಂಜು ನೋಡಿಲ್ಲ.. ರಸ್ತೆ ಪೂರ ಮಸುಕು ಮಸುಕಾಗಿದೆ. ಎದುರಿಗೆ ಬರೋ ವೆಹಿಕಲ್ ಕೂಡ ಕಾಣ್ತಿಲ್ಲ. ಸ್ವೆಟರ್ ಕೂಡ ಒದ್ದೆಯಾಗ್ತಿದೆ. ರಸ್ತೆ ದಾಟೋಣ ಅಂದ್ರೆ ಯಾವುದಾದ್ರೂ ಗಾಡಿ ನುಗ್ಗಿ ಬಿಡುತ್ತಾ ಅಂಥ ಹೆದರಿಕೆ ಕಣ್ರೀ…

ಬುಧವಾರ ಮುಂಜಾನೆ ಕಾಣಿಸಿಕೊಂಡ ದಟ್ಟ ಇಬ್ಬನಿಯ ಮೋಡಿಗೆ ದಾವಣಗೆರೆ ಜನ ನಿಬ್ಬೆರಗಾದ ಪರಿ ಇದು. ಬಾನು, ಹಿಮದ ಹೊದಿಕೆ ಹೊದ್ದಿತ್ತು. ಉದಯ ರವಿಗೆ ನಮಸ್ಕರಿಸೋಣ ಎಂದು ಮನೆಯಿಂದ ಹೊರಬಂದವರಿಗೆ ಅಚ್ಚರಿ ಕಾದಿತ್ತು. ಚುಮುಚುಮು ಚಳಿ ಜತೆಗೆ ಮಂಜಿನ ಸೊಬಕು ರೋಮಾಂಚನಗೊಳಿಸಿತು.

ಬೆಳಗ್ಗೆ ಆರೂವರೆಯಿಂದಲೇ ಮಂಜಿನಾಟ ಶುರುವಾಗಿತ್ತು. ಕೇವಲ ಎಂಟತ್ತು ಅಡಿ ದೂರದಲ್ಲಿದ್ದವರು ಕಾಣದಷ್ಟು ದಟ್ಟ ಹಿಮ ಅದಾಗಿತ್ತು. ರಾಷ್ಟ್ರೀಯ ಹೆದ್ದಾರಿ, ನಗರದ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ವಾಹನಗಳು ಹೆಡ್‌ಲೈಟ್ ಬಳಸಿ, ಮಂಜನ್ನು ಸೀಳುತ್ತಲೇ ಸಾಗಿದವು. ದಾರಿ ಕಾಣದೆ ಕೆಲ ವಾಹನಗಳು ಮಂದಗತಿಯಲ್ಲಿ ಚಲಿಸಿದವು.

ವಾಹನಗಳ ವೈಫರ್‌ಗಳು ಎಡೆಬಿಡದೆ ಇಬ್ಬನಿ ಹನಿಗಳನ್ನು ಒರೆಸಿದವು. ಥಂಡಿಯಲ್ಲೇ ವಾಹನ ಚಲಾಯಿಸಿದ ಬೈಕ್ ಸವಾರರ ಕಂಗಳಲ್ಲಿ ನೀರು ಹನಿಯುತ್ತಿತ್ತು. ಮಂಜಿನ ಕಾರಣಕ್ಕೆ ಕೆಲವೆಡೆ ವಿದ್ಯುತ್ ದೀಪಗಳು ಉರಿಯುತ್ತಲೇ ಇದ್ದವು. ವಾಯು ವಿಹಾರಕ್ಕೆ ಬಂದವರು ಹೋಟೆಲ್, ಚಹಾ ಅಂಗಡಿಗಳಿಗೆ ತೆರಳಿ ಕಾಫಿ-ಟೀ ಹೀರಿದರು.

ಜನರು ಧರಿಸಿದ್ದ ಸ್ವೆಟರ್, ಮಫ್ಲರ್, ಶಾಲು, ಮಂಕಿ ಕ್ಯಾಪ್, ಜರ್ಕಿನ್ ಎಲ್ಲವೂ ಒದ್ದೆಯಾದವು. ಪತ್ರಿಕೆ ಹಾಕುವ ಹುಡುಗರು, ಹಾಲು-ತರಕಾರಿ ಮಾರುವವರು, ಶಾಲೆ, ಕಚೇರಿಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದವರು ಬೆಳಗಿನ ಹಿತ ಅನುಭವಿಸಿದರು.

ಕೆಲವರು ಮೊಬೈಲ್‌ಗಳಲ್ಲಿ ಇಬ್ಬನಿಯ ವೈಭವವನ್ನು ವಿಡಿಯೋದಲ್ಲಿ ಸೆರೆ ಹಿಡಿದರು. ಫೋಟೋ ಕ್ಲಿಕ್ಕಿಸಿದರು. ಇಬ್ಬನಿಯ ಇಂತಹ ಅಚ್ಚರಿ ಕಂಡಿದ್ದು ಇದೇ ಮೊದಲು ಎಂದು ಅನೇಕರು ಹೇಳಿಕೊಂಡರು. ಸೂರ್ಯ ಕರ್ತವ್ಯಕ್ಕೆ ರುಜು ಹಾಕಿದ್ದು ಬೆಳಗ್ಗೆ 9ರ ನಂತರವೇ!

ದಾವಣಗೆರೆಯಿಂದ ಕರೂರಿಗೆ ಕಾರ್ಯಕ್ರಮ ನಿಮಿತ್ತ ಹೊರಟಿದ್ದೆ. 20 ನಿಮಿಷದಲ್ಲಿ ಹೋಗಬೇಕಿದ್ದ ಕಾರು, ದಟ್ಟ ಮಂಜಿನಿಂದ 40 ನಿಮಿಷ ತೆಗೆದುಕೊಂಡಿತು. ಇಬ್ಬನಿಯ ಅಚ್ಚರಿ ಕಂಡು ನಾವು ಕಾಶ್ಮೀರ ಅಥವಾ ಮಡಿಕೇರಿಯಲ್ಲಿದ್ದೆವಾ ಎಂದೆನಿಸಿತು. ಇದೊಂದು ಅದ್ಭುತ ಅನುಭವ.
ಆರ್.ಟಿ. ಅರುಣ್‌ಕುಮಾರ್, ಕಲಾವಿದ.