More

    ಆರ್ಥಿಕತೆಗೆ ದಾವೋಸ್ ಟಾನಿಕ್?: ರಾಜ್ಯದ ಸಾಧನೆ, ಸಾಧ್ಯತೆಗಳ ಅನಾವರಣ, ಬಂಡವಾಳ ಆಕರ್ಷಣೆ ಗುರಿ

    ಬೆಂಗಳೂರು: ಜಾಗತಿಕ ಆರ್ಥಿಕ ಹಿಂಜರಿತ, ಜಿಡಿಪಿ ಕುಸಿತ, ಉದ್ಯಮ ಕ್ಷೇತ್ರದ ದುಃಸ್ಥಿತಿ, ನಿರುದ್ಯೋಗ ಸಮಸ್ಯೆ ನಡುವೆಯೇ ಸ್ವಿಜರ್ಲೆಂಡ್​ನ ದಾವೋಸ್​ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗ ಹೊಸ ಆಶಾಕಿರಣ ಮೂಡಿಸಿದ್ದು, ರಾಜ್ಯಕ್ಕೆ ಆರ್ಥಿಕ ಉತ್ತೇಜನ ಸಿಗುವ ನಿರೀಕ್ಷೆ ಹುಟ್ಟಿಸಿದೆ.

    ಜಾಗತಿಕ ಆರ್ಥಿಕ 50ನೇ ವಾರ್ಷಿಕ ಸಮ್ಮೇಳನ 21ರಿಂದ ನಾಲ್ಕು ದಿನ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ನೇತೃತ್ವದ ನಿಯೋಗ ಬುಧವಾರ ಪ್ರಯಾಣ ಬೆಳೆಸಿದೆ. ‘ಸಮಗ್ರ ಹಾಗೂ ಸುಸ್ಥಿರ ವಿಶ್ವಕ್ಕಾಗಿ ಹೂಡಿಕೆದಾರರು’ ಈ ವರ್ಷದ ಘೋಷವಾಕ್ಯವಾಗಿದೆ. ಇದಕ್ಕೆ ಪೂರಕವಾಗಿ ರಾಜ್ಯದಲ್ಲಿರುವ ವಿಪುಲ ಅವಕಾಶಗಳನ್ನು ಸಿಎಂ ನೇತೃತ್ವ ನಿಯೋಗ ಜಾಗತಿಕ ಮಟ್ಟದಲ್ಲಿ ತೆರೆದಿಡಲಿದೆ. ಜಾಗತಿಕ ಆರ್ಥಿಕ ಹಿಂಜರಿತ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಹೀಗಾಗಿ ವಿಶ್ವ ಆರ್ಥಿಕ ವೇದಿಕೆ ಸಭೆಯ ಮೂಲಕ ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಹರಿದು ಬರಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಚಿವ ಜಗದೀಶ ಶೆಟ್ಟರ್, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಇನ್ನಿತರ ಪ್ರಮುಖ ಅಧಿಕಾರಿಗಳು ನಿಯೋಗದಲ್ಲಿ ಇದ್ದಾರೆ. ವಿಶ್ವ ಆರ್ಥಿಕ ಶೃಂಗದ ಕಾರ್ಯಸೂಚಿ: ಆರ್ಥಿಕ ಅಸಮಾನತೆಯಿಂದಾಗಿ ಉಂಟಾಗಿರುವ ಸಾಮಾಜಿಕ ತಳಮಳ, ಹವಾಮಾನ ವೈಪರೀತ್ಯ, ಪಾಲುದಾರಿಕೆ ಬಂಡವಾಳದ ಮಾರ್ಗದಲ್ಲಿ ರಾಜಕೀಯ ಧ್ರುವೀಕರಣದ ಸವಾಲು ಎದುರಿಸುವ ಬಗೆ ದಾವೋಸ್ ವಿಶ್ವ ಆರ್ಥಿಕ ಶೃಂಗದ ಕಾರ್ಯಸೂಚಿ. ಶ್ರೇಯಸ್ಸಿಗಾಗಿ ತಂತ್ರಜ್ಞಾನ, ಆರೋಗ್ಯಪೂರ್ಣ ಭವಿಷ್ಯ, ಸುಸ್ಥಿರ ಆರ್ಥಿಕತೆ ಮುಂತಾದ ವಿಷಯಗಳ ಚರ್ಚೆ ಒಳಗೊಂಡು 220 ಕಾರ್ಯಕ್ರಮಗಳು ನಿಗದಿಯಾಗಿವೆ. ಜಗತ್ತಿನ ಬಲಿಷ್ಠ ಉದ್ಯಮಿಗಳು, ಪ್ರಮುಖ ನಾಯಕರು, ಪ್ರಭಾವಿ ರಾಜಕಾರಣಿಗಳು ಸೇರಿ 770 ವ್ಯಕ್ತಿಗಳು ಈ ಸಮ್ಮೇಳನದಲ್ಲಿ ವಿಚಾರ ಮಂಡಿಸುವರು.ಜಾಗತಿಕ ನಾಯಕರ ಸಮಾಗಮ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರಿಟನ್ ರಾಜಕುಮಾರ ಚಾರ್ಲ್ಸ್, ಜರ್ಮನಿ ಚಾನ್ಸಲರ್ ಏಂಜೆಲಾ ಮರ್ಕೆಲ್, ಸ್ವೀಡನ್ ಮೂಲದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್​ಬರ್ಗ್, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಸಹಿತ ಜಗತ್ತಿನ ಪ್ರಮುಖ ದೇಶಗಳ ನಾಯಕರು ಪಾಲ್ಗೊಳ್ಳಲಿದ್ದಾರೆ. ಸದ್ಗುರು, ದೀಪಿಕಾ ಕಾರ್ಯಕ್ರಮ: ಈ ಬಾರಿಯ ವಿಶ್ವ ಆರ್ಥಿಕ ಶೃಂಗದ ಬೆಳಗಿನ ಅವಧಿಯಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರ ಧ್ಯಾನ ಕಾರ್ಯಕ್ರಮ ನಡೆಯಲಿದೆ. ಮಾನಸಿಕ ಆರೋಗ್ಯ ಇನ್ನಿತರ ವಿಷಯಗಳ ಕುರಿತು ನಟಿ ದೀಪಿಕಾ ಪಡುಕೋಣೆ ಮಾತನಾಡಲಿದ್ದಾರೆ.

    ಭಾರತದ ನಿಯೋಗದಲ್ಲಿ ಯಾರ್ಯಾರು?

    ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ನೇತೃತ್ವದ ಭಾರತದ ನಿಯೋಗದಲ್ಲಿ ಕೇಂದ್ರ ಸಚಿವರು, ಮೂವರು ಮುಖ್ಯಮಂತ್ರಿಗಳು ಹಾಗೂ ಪ್ರಮುಖ ಕಂಪನಿಗಳ 100 ಸಿಇಒಗಳು ಇರಲಿದ್ದಾರೆ. ಈ ಸಮಾವೇಶದಲ್ಲಿ ದೇಶದ ಉದ್ಯಮಿಗಳಾದ ಗೌತಮ್ ಅದಾನಿ, ರಾಹುಲ್ ಬಜಾಜ್, ಮುಖೇಶ್ ಅಂಬಾನಿ ಕುಟುಂಬ, ಕುಮಾರಮಂಗಳಂ ಬಿರ್ಲಾ, ಸುನಿಲ್ ಮಿತ್ತಲ್, ಟಾಟಾ ಸಮೂಹದ ಎನ್.ಚಂದ್ರಶೇಖರನ್, ಉದಯ್ ಕೊಟಕ್, ಸಜ್ಜನ್ ಜಿಂದಾಲ್, ನಂದನ್ ನಿಲೇಕಣಿ, ಆನಂದ್ ಮಹಿಂದ್ರಾ, ಎಸ್​ಬಿಐ ಅಧ್ಯಕ್ಷ ರಜನೀಶ್ ಕುಮಾರ್, ಅಜೀಂ ಪ್ರೇಮ್ ಮುಂತಾದವರು ಭಾಗವಹಿಸಲಿದ್ದಾರೆ.

    ಬಂಡವಾಳ ಆಕರ್ಷಣೆ

    38 ಕೈಗಾರಿಕೋದ್ಯಮಿಗಳು, ಹೂಡಿಕೆದಾರರ ಜತೆ ಸಂವಾದ ಹಾಗೂ ಚರ್ಚೆ ನಿಗದಿಯಾಗಿದ್ದು, ನಮ್ಮ ಇತಿಮಿತಿಯೊಳಗೆ ಸವಲತ್ತುಗಳನ್ನು ಒದಗಿಸುವ ಭರವಸೆ ನೀಡಿ ರಾಜ್ಯದತ್ತ ಸೆಳೆಯುತ್ತೇವೆ. 2020ರ ನ. 3ರಿಂದ 5ರವರೆಗೆ ಇನ್ವೆಸ್ಟ್ ಕರ್ನಾಟಕ ಸಮಾವೇಶ ಬೆಂಗಳೂರಿನಲ್ಲಿ ಆಯೋಜಿಸಿರುವ ಬಗ್ಗೆ ಮಾಹಿತಿ ನೀಡಲಾಗುತ್ತದೆ. ವಿಶ್ವದ ಪ್ರತಿಷ್ಠಿತ ಕಂಪನಿಗಳ ಮುಖ್ಯಸ್ಥರು ಹಾಗೂ ಹೂಡಿಕೆದಾರರನ್ನು ಆಹ್ವಾನಿಸಲಿದ್ದೇವೆ. ರಾಜ್ಯದ ಸಾಧನೆ ಮತ್ತು ಸಾಧ್ಯತೆಗಳನ್ನು ದಾವೋಸ್​ನಲ್ಲಿ ಅನಾವರಣ ಮಾಡಲಿದ್ದೇವೆ. ಇದರಿಂದ ಅಪಾರ ಬಂಡವಾಳ ಹರಿದು ಬಂದು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕ ಪೆವಿಲಿಯನ್

    ಸಮಾವೇಶದ ಮುನ್ನಾ ದಿನ ಸೋಮವಾರ ಕರ್ನಾಟಕದ ಪೆವಿಲಿಯನ್​ಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಲಿದ್ದು, ವಿಶ್ವ ಆರ್ಥಿಕ ವೇದಿಕೆಯ ವ್ಯವಸ್ಥಾಪಕ ನಿರ್ದೇಶಕರು, ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ದಕ್ಷಿಣ ವಲಯದ ಮುಖ್ಯಸ್ಥರು ಹಾಜರಿರಲಿದ್ದಾರೆ. 21 ರಿಂದ 24ರವರೆಗೆ ಆಪ್ಕೋ, ಪಿ ಆಂಡ್ ಜಿ,

    ಡಿಎಕ್ಸ್​ಸಿ ಟೆಕ್ನಾಲಜಿ, ವಾಲ್ಡ ್ನ್ ಗ್ರೂಪ್, ಕ್ಯಾರ್ಸಿಬೆರಿ ಗ್ರೂಪ್, ವೇದಿಕೆಯ ಪ್ರಮುಖರು, ವಿಎಂ ವೇರ್, ಡಸ್ಸಾಲ್ಟ್ -3ಡಿಎಸ್, ಲುಲು ಗ್ರೂಪ್, ಕ್ರೆಸೆಂಟ್ ಪೆಟ್ರೋಲಿಯಂ, ಡೆನ್ಸೋ ಕಾಪೋರೇಷನ್ (ನೆಸ್ಲೆ) ಇನ್ನಿತರ ಆರ್ಥಿಕ ದಿಗ್ಗಜರ ಜತೆ ಸಿಎಂ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ. ಇನ್ವೆಸ್ಟ್ ಕರ್ನಾಟಕದ ಸೆಷನ್ ಬುಧವಾರ ನಡೆಯಲಿದ್ದು, ರಾಜ್ಯದ ಸಾಧನೆ ಹಾಗೂ ಸಾಧ್ಯತೆಗಳು ಅನಾವರಣಗೊಳ್ಳಲಿವೆ. ತಂತ್ರಜ್ಞಾನದ ಆವಿಷ್ಕಾರಗಳು, ಕೌಶಲ ಪೂರ್ಣ ಮಾನವ ಸಂಪನ್ಮೂಲ ಹಾಗೂ ಅಗತ್ಯ ಸವಲತ್ತುಗಳ ಲಭ್ಯತೆಯನ್ನು ಉದ್ಯಮಿಗಳು, ಹೂಡಿಕೆದಾರರಿಗೆ ಸಿಎಂ ಮನವರಿಕೆ ಮಾಡಿಕೊಟ್ಟು ಆಹ್ವಾನಿಸಲಿದ್ದು, ವಿಶ್ವ ಆರ್ಥಿಕ ವೇದಿಕೆ ಸಮಾವೇಶದಲ್ಲಿ ಗುರುವಾರ ಸಿಎಂ ಭಾಷಣ ಮಾಡುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts