ತಟಸ್ಥ ಸ್ಥಳಕ್ಕೆ ಆಟಗಾರರ ಬೇಡಿಕೆ: ಡೇವಿಸ್ ಕಪ್ ಪಂದ್ಯ ಸ್ಥಳಾಂತರಕ್ಕೆ ಎಐಟಿಎಗೆ ಮನವಿ

ನವದೆಹಲಿ: ಪಾಕಿಸ್ತಾನ ವಿರುದ್ಧದ ಏಷ್ಯಾ/ ಒಶಿಯಾನಿಯಾ ಗುಂಪು-1ರ ಮುಖಾಮುಖಿ ಯನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ಭಾರತ ತಂಡದ ಆಟಗಾರರು, ಅಖಿಲ ಭಾರತ ಟೆನಿಸ್ ಸಂಸ್ಥೆಗೆ(ಎಐಟಿಎ) ಮನವಿ ಸಲ್ಲಿಸಿದ್ದಾರೆ. ಇದನ್ನು ಪರಿಗಣಿಸಿರುವ ಎಐಟಿಎ ಕಾರ್ಯದರ್ಶಿ ಹಿರಣ್ಮಯ್ ಚಟರ್ಜಿ, ಪ್ರಸ್ತುತ ಸನ್ನಿವೇಶದಲ್ಲಿ ಭಾರತದ ಆಟಗಾರರು ಪಾಕ್​ನಲ್ಲಿ ಆಡುವುದು ಕಷ್ಟ ಎನ್ನುವುದನ್ನು ಐಟಿಎಫ್ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ತಟಸ್ಥ ಸ್ಥಳಕ್ಕೆ ಎಐಟಿಎ ಬೇಡಿಕೆ ಇಟ್ಟ ಹೊರತಾಗಿಯೂ ಐಟಿಎಫ್ ಇದನ್ನು ನಿರಾಕರಿಸಿತ್ತು. ಆ ಬಳಿಕ, ಇಸ್ಲಾಮಾಬಾದ್​ನಲ್ಲಿ ಭದ್ರತೆಯನ್ನು ಮರುಪರಿಶೀಲಿಸಿ ಎಂದು ಐಟಿಎಫ್​ಗೆ ಮನವಿ ಮಾಡಿತ್ತು. ಇದರಿಂದ ಬೇಸರಗೊಂಡಿರುವ ಆಟಗಾರರು, ತಟಸ್ಥ ಸ್ಥಳಕ್ಕೆ ಮನವಿ ಮಾಡಿದ್ದಾರೆ. ‘ತಟಸ್ಥ ಸ್ಥಳವನ್ನು ಪರಿಗಣಿಸಿ ಎಂದು ಎಐಟಿಎಗೆ ಮನವಿ ಮಾಡಿದ್ದೇವೆ’ ಎಂದು ಭಾರತ ಡೇವಿಸ್ ಕಪ್ ತಂಡದ ಆಡದ ನಾಯಕ ಮಹೇಶ್ ಭೂಪತಿ ಹೇಳಿದ್ದಾರೆ. ಪ್ರಕರಣವನ್ನು ಎಐಟಿಎ ನಿಭಾಯಿಸಿದ ರೀತಿಯಿಂದಲೂ ಅಚ್ಚರಿಯಾಗಿದೆ ಎಂದು ತಂಡದ ಆಟಗಾರರೊಬ್ಬರು ಹೇಳಿದ್ದಾರೆ.

ಐಟಿಎಫ್ ಮತ್ತೊಮ್ಮೆ ಭದ್ರತೆಯನ್ನು ಪರಿಶೀಲಿಸಿದರೆ, ಸೆಪ್ಟೆಂಬರ್ 14-15ರಂದು ಇಸ್ಲಾಮಾಬಾದ್​ನಲ್ಲಿ ಪಂದ್ಯ ಆಡಲು ನಾವು ಸಿದ್ಧ. ವೀಸಾ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಎಐಟಿಎ ಸೋಮವಾರ ಹೇಳಿತ್ತು. -ಪಿಟಿಐ

Leave a Reply

Your email address will not be published. Required fields are marked *