VIDEO| ಮುದ್ದಿನ ಮಗಳೊಂದಿಗೆ ಆಟೋ ಹತ್ತಿ ಮುತ್ತಿನ ನಗರಿಯಲ್ಲಿ ಸುತ್ತಾಡಿದ ವಾರ್ನರ್​

ಹೈದರಾಬಾದ್​: ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷದ ನಿಷೇಧಕ್ಕೆ ಒಳಗಾಗಿ ಮತ್ತೆ ಕ್ರಿಕೆಟ್​ಗೆ ಮರಳಿರುವ ಆಸಿಸ್​ ಪಡೆಯ ಎಡಗೈ ದಾಂಡಿಗ ಡೇವಿಡ್​ ವಾರ್ನರ್​ ಸದ್ಯ ಐಪಿಎಲ್​ನಲ್ಲಿ ಮಿಂಚುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಸಖತ್​ ಎಂಜಾಯ್​ ಮಾಡುತ್ತಿರುವ ವಾರ್ನರ್ ತಮ್ಮ ಮಗಳೊಂದಿಗೆ ಆಟೋರಿಕ್ಷಾ ಏರಿ ಹೈದಾರಬಾದ್​ನಲ್ಲಿ ಸವಾರಿ ನಡೆಸಿರುವ ವಿಡಿಯೋ ವೈರಲ್​ ಆಗಿದೆ.

ವಾರ್ನರ್​ ತಮ್ಮ ನಾಲ್ಕು ವರ್ಷದ ಮಗಳಾದ ಇವಿ ಮೇ ಜತೆ ಆಟೋ ಸವಾರಿ ನಡೆಸಿದ್ದಾರೆ. ಈ ದೃಶ್ಯವನ್ನು ಬಲಬದಿಯಲ್ಲಿ ಹೋಗುತ್ತಿದ್ದ ಮತ್ತೊಂದು ಆಟೋದೊಳಗಿದ್ದವರು ಸೆರೆಹಿಡಿದಿದ್ದು, ಸನ್​ ರೈಸರ್ಸ್​ ಹೈದರಾಬಾದ್​ ತಂಡದ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಕಷ್ಟು ವೈರಲ್​ ಆಗಿರುವ ವಿಡಿಯೋದಲ್ಲಿ ವಾರ್ನರ್​ ಹಾಗೂ ಅವರ ಮಗಳು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದವರಿಗೆ ಟಾಟಾ ಮಾಡಿರುವುದು ವಿಶೇಷವಾಗಿದೆ.

ಸನ್​ ರೈಸರ್ಸ್​ ಹೈದರಾಬಾದ್​ ತಂಡವನ್ನು ಮುನ್ನಡೆಸುತ್ತಿರುವ ವಾರ್ನರ್​ ಸದ್ಯ ಐಪಿಎಲ್​ನಲ್ಲಿ ರನ್​ ಹೊಳೆ ಹರಿಸುತ್ತಿದ್ದಾರೆ. ವಾರ್ನರ್ 349 ರನ್​ಗಳೊಂದಿಗೆ ಮೊದಲನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಪಂದ್ಯದ ವೇಳೆ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಲುಕಿ ತಪ್ಪೊಪ್ಪಿಕೊಂಡು ಒಂದು ವರ್ಷ ನಿಷೇಧಕ್ಕೆ ವಾರ್ನರ್​ ಒಳಗಾಗಿದ್ದರು. ಒಂದು ವರ್ಷದ ವನವಾಸದ ಬಳಿಕ ಮರಳಿ ಗೂಡಿಗೆ ಬಂದಿರುವ ವಾರ್ನರ್​ ಅವರನ್ನು ಎಲ್ಲರೂ ಆತ್ಮೀಯವಾಗೇ ಬರಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)